ಸಲಿಂಗಕಾಮ ನಿಷೇಧ ವಿರುದ್ಧದ ಅರ್ಜಿ ವಿಚಾರಣೆ
ಹೊಸದಿಲ್ಲಿ, ಜೂ.29: ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದ ಸಲಿಂಗಕಾಮ ನಿಷೇಧ ಕಾನೂನನ್ನು ರದ್ದುಮಾಡುವಂತೆ ಕೋರಿ ಸಲ್ಲಿಸಿದ ಹೊಸ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂತೀ ವಿಚಾರಣೆ ನಡೆಸಲಿದ್ದಾರೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 377ರ ಅನ್ವಯ ಸಲಿಂಗಕಾಮವನ್ನು ನಿಷೇಧಿಸಲಾಗಿದ್ದು, ನೈಸರ್ಗಿಕ ನಿಯಮಕ್ಕೆ ವಿರುದ್ಧವಾಗಿ ಸಲಿಂಗಿಗಳ ಲೈಂಗಿಕತೆಯನ್ನು ಇದು ನಿಷೇಧಿಸುತ್ತದೆ. ಆದರೆ ಇದು ನಾಗರಿಕರ ಮೂಲಭೂತ ಹಕ್ಕಾದ ಲೈಂಗಿಕ ಆಯ್ಕೆಯ ಸ್ವಾತಂತ್ರಕ್ಕೆ ಧಕ್ಕೆ ತರುವಂತಹ ವಿಷಯವೆಂದು ಸಲಿಂಗಿಗಳ ವಾದವಾಗಿದೆ. ಈ ಮುನ್ನ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ಈ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಬೇಕು ಎಂದು ಹೇಳಿತ್ತು ಎಂದು ಸಲಿಂಗಿಗಳ ಪರ ವಕೀಲ ಅರವಿಂದ ದತ್ತರ್ ಪ್ರಕಟಿಸಿದ್ದಾರೆ.
ಈ ನಿಷೇಧವನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಿದ ಪ್ರತ್ಯೇಕ ಅರ್ಜಿಯೊಂದನ್ನು ಮುಖ್ಯ ನ್ಯಾ.ಟಿ.ಎಸ್.ಠಾಕೂರ್ ಈಗಾಗಲೇ ವಿಚಾರಣೆ ನಡೆಸುತ್ತಿದ್ದಾರೆ. ಸೆಕ್ಷನ್ 377 ಬದಲಾಯಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ತೀರ್ಪಿನ ವಿರುದ್ಧ ಕ್ಯುರೇಟಿವ್ ಅರ್ಜಿ ಸಲ್ಲಿಸಲಾಗಿದೆ.