×
Ad

ಎರಡು ಕೋಟಿ ಭಾರತೀಯ ಮಕ್ಕಳಿಗೆ ಸಿಗದ ಪ್ರಿಸ್ಕೂಲ್ ಸೌಲಭ್ಯ

Update: 2016-06-29 23:03 IST

ಹೊಸದಿಲ್ಲಿ, ಜೂ.29: ಭಾರತದಲ್ಲಿ ಇರುವ 3-6 ವರ್ಷ ವಯಸ್ಸಿನ 7.4 ಕೋಟಿ ಮಕ್ಕಳ ಪೈಕಿ 2 ಕೋಟಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಾಲಾ ಸೌಲಭ್ಯ ಸಿಗುತ್ತಿಲ್ಲ ಎಂಬ ಆತಂಕಕಾರಿ ಅಂಶವನ್ನು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ. ಪೂರ್ವ ಪ್ರಾಥಮಿಕ ಶಾಲಾ ಸೌಲಭ್ಯ ಸಿಗದ ಬಹುತೇಕ ಮಕ್ಕಳು ದುರ್ಬಲ ಹಾಗೂ ಕೆಳವರ್ಗದ ಮಕ್ಕಳು ಎನ್ನುವ ಅಂಶವನ್ನು ಯೂನಿಸೆಫ್ ವರದಿಯಲ್ಲಿ ಹೇಳಲಾಗಿದೆ.

ಸ್ಟೇಟ್ ಆಫ್ ದ ವರ್ಲ್ಡ್ ಚಿಲ್ಡ್ರನ್ಸ್ ರಿಪೋರ್ಟ್-2016 ಎಂಬ ಜಾಗತಿಕ ವರದಿಯನ್ನು ಯೂನಿಸೆಫ್ ಬಿಡುಗಡೆ ಮಾಡಿದ್ದು, ಪೂರ್ವ ಪ್ರಾಥಮಿಕ ಶಾಲಾ ಸೌಲಭ್ಯ ಸಿಗದ ಮಕ್ಕಳ ಪೈಕಿ ಶೇ.34 ಮಂದಿ ಮುಸ್ಲಿಮ್ ಮಕ್ಕಳು, ಶೇ. 25.9ರಷ್ಟು ಹಿಂದೂಗಳು ಹಾಗೂ ಶೇ. 25.6ರಷ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಸೇರಿದ ಮಕ್ಕಳು ಎಂದು ಇದರಲ್ಲಿ ವಿವರಿಸಲಾಗಿದೆ.
ಹೀಗೆ ಪೂರ್ವ ಪ್ರಾಥಮಿಕ ಶಿಕ್ಷಣ ಸೌಲಭ್ಯ ವಂಚಿತ ಮಕ್ಕಳಿಗೆ ದೀರ್ಘಾವಧಿಯಲ್ಲಿ ಅವರ ಕಲಿಕೆಯ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿ ಎಚ್ಚರಿಸಿದೆ. ಪೂರ್ವ ಪ್ರಾಥಮಿಕ ಶಾಲೆಗೆ ಹೋಗದೆ ನೇರವಾಗಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು, ಶಾಲೆಯನ್ನು ಅರ್ಧದಿಂದಲೇ ತೊರೆಯುವ ಸಾಧ್ಯತೆ ಹೆಚ್ಚು. ಜತೆಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಲೆಯಲ್ಲಿ ಕಲಿಕೆಗೆ ಅವಕಾಶ ಆಗುವುದಿಲ್ಲ ಎಂದು ಯೂನಿಸೆಫ್‌ನ ಭಾರತೀಯ ಪ್ರತಿನಿಧಿ ಲೂಯಿಸ್ ಜಾರ್ಜ್ ಅರ್ಸೆನಾಲ್ಡ್ ವರದಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೇಳಿದರು.

ಶಾಲೆಯಿಂದ ಹೊರಗುಳಿಯುವ ಮಕ್ಕಳ ಕುರಿತಂತೆ ರಾಷ್ಟ್ರೀಯ ಸಮೀಕ್ಷೆ 2014ರಲ್ಲಿ ನಡೆಸಿದ ಅಂದಾಜಿನಂತೆ, ಇಂಥ ಮಕ್ಕಳ ಪೈಕಿ ಶೇ.60ರಷ್ಟು ಮಂದಿ 3ನೆ ತರಗತಿಗಿಂತ ಮುಂಚೆಯೆ ಶಾಲೆ ತೊರೆಯುತ್ತಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಶಿಕ್ಷಣದ ಹಕ್ಕು ಯೋಜನೆಯಿಂದಾಗಿ 6 ರಿಂದ 13 ವರ್ಷದ ಒಳಗಿನ ಮಕ್ಕಳು ಶಾಲೆ ಬಿಡುವ ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನೂ ವರದಿ ಉಲ್ಲೇಖಿಸಿದೆ. ಈ ಪ್ರಮಾಣ 2009ರಲ್ಲಿ 80 ಲಕ್ಷ ಇದ್ದುದು, 2014ರಲ್ಲಿ 60 ಲಕ್ಷಕ್ಕೆ ಇಳಿದಿದೆ.

ಆದಾಗ್ಯೂ ಶೇ. 36ರಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವ ಮುನ್ನ ಶಾಲೆ ಬಿಡುತ್ತಿದ್ದು, ಈ ಪೈಕಿ ಅರ್ಧದಷ್ಟು ದುರ್ಬಲ ವರ್ಗದವರು ಎಂದು ವಿವರಿಸಲಾಗಿದೆ.
ಶಿಕ್ಷಣದ ಗುಣಮಟ್ಟದ ಬಗ್ಗೆಯೂ ವರದಿ ವಿವರ ನೀಡಿದ್ದು, ರಾಷ್ಟ್ರೀಯ ಸಾಧನೆ ಸಮೀಕ್ಷೆಯ ವರದಿಯ ಹಿನ್ನೆಲೆಯಲ್ಲಿ ಈ ವಿವರಗಳನ್ನು ನೀಡಲಾಗಿದೆ. ಐದನೆ ತರಗತಿಯ ಮಕ್ಕಳ ಪೈಕಿ ಅರ್ಧದಷ್ಟು ಮಂದಿ ಮಾತ್ರ ಗಣಿತ ವಿಷಯದಲ್ಲಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿರುವುದನ್ನು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News