ಸಾರ್ವಕಾಲಿಕ ಶ್ರೇಷ್ಠ 11 ಆಟಗಾರರ ಪಟ್ಟಿ ಪ್ರಕಟಿಸಿದ ಸಂಗಕ್ಕರ
ಹೊಸದಿಲ್ಲಿ, ಜೂ.29: ಕುಮಾರ ಸಂಗಕ್ಕರ ಅವರ ಸಾರ್ವಕಾಲಿಕ ಶ್ರೇಷ್ಠ 11 ಆಟಗಾರರ ಪಟ್ಟಿಯಲ್ಲಿ ಐಕಾನ್ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್‌ಗೆ ಸ್ಥಾನ ಲಭಿಸಿಲ್ಲ. ಆದರೆ, ‘ಮಹಾಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಶ್ರೀಲಂಕಾ ಮಾಜಿ ನಾಯಕ ಆಯ್ಕೆ ಮಾಡಿದ್ದ ತಂಡದಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರನಾಗಿದ್ದಾರೆ.
ಸಂಗಕ್ಕರ ಆಯ್ಕೆ ಮಾಡಿದ್ದ ತಂಡದಲ್ಲಿ ಶ್ರೀಲಂಕಾದ ಮಾಜಿ ನಾಯಕ ಅರವಿಂದ್ ಡಿ’ಸಿಲ್ವಾ ನಾಯಕನಾಗಿದ್ದಾರೆ. ಪ್ರಸ್ತುತ ಭಾರತ ‘ಎ’ ತಂಡದ ಕೋಚ್ ಆಗಿರುವ ದ್ರಾವಿಡ್ ಆಸ್ಟ್ರೇಲಿಯದ ಮಾಜಿ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್‌ರೊಂದಿಗೆ ಆರಂಭಿಕ ಸ್ಥಾನ ಪಡೆದಿದ್ದಾರೆ.
ಬ್ಯಾಟಿಂಗ್ ಸರದಿಯಲ್ಲಿ ಸಂಗಕ್ಕರ ಅವರ ಸಾರ್ವಕಾಲಿಕ ಫೇವರಿಟ್ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಹಾಗೂ ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರಿದ್ದಾರೆ. ದಕ್ಷಿಣ ಆಫ್ರಿಕದ ಶ್ರೇಷ್ಠ ಆಲ್‌ರೌಂಡರ್ ಜಾಕ್ ಕಾಲಿಸ್ ತಂಡದಲ್ಲಿದ್ದಾರೆ.
ಆಸ್ಟ್ರೇಳಿಯದ ವಿಕೆಟ್‌ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ವಿಕೆಟ್‌ಕೀಪಿರ್ ಆಗಿ ಆಯ್ಕೆಯಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಶ್ರೀಲಂಕಾದ ವೇಗದ ದಂತಕತೆ ಚಾಮಿಂಡಾ ವಾಸ್ ಮುನ್ನಡೆಸಲಿದ್ದಾರೆ.
ಸಂಗಕ್ಕರ ಆಯ್ಕೆ ಮಾಡಿದ್ದ ತಂಡ: ಮ್ಯಾಥ್ಯೂ ಹೇಡನ್, ರಾಹುಲ್ ದ್ರಾವಿಡ್,ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್, ಅರವಿಂದ್ ಡಿಸಿಲ್ವಾ(ನಾಯಕ), ಜಾಕ್ ಕಾಲಿಸ್, ಆಡಮ್ ಗಿಲ್‌ಕ್ರಿಸ್ಟ್(ವಿಕೆಟ್‌ಕೀಪರ್), ಶೇನ್ ವಾರ್ನ್, ಮುತ್ತಯ್ಯ ಮುರಳೀಧರನ್, ವಸೀಂ ಅಕ್ರಂ, ಚಾಮಿಂಡಾ ವಾಸ್.