×
Ad

ವಿಂಬಲ್ಡನ್ ಓಪನ್: ಜೊಕೊವಿಕ್‌ಗೆ ಸತತ 30ನೆ ಜಯ

Update: 2016-06-29 23:16 IST

ಲಂಡನ್, ಜೂ.29: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಬುಧವಾರ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸತತ 30ನೆ ಪಂದ್ಯವನ್ನು ಜಯಿಸಿ ಗಮನ ಸೆಳೆದರು.

ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್‌ನ 2ನೆ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೊಕೊವಿಕ್ ಮಳೆ ಬಾಧಿತ ಪಂದ್ಯದಲ್ಲಿ ಅಡ್ರಿಯಾನ್ ಮನ್ನಾರಿನೊರನ್ನು 6-4, 6-3, 7-6(7/5) ಸೆಟ್‌ಗಳ ಅಂತರದಿಂದ ಮಣಿಸಿದರು.

 ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೊವಿಕ್ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಮುಂದಿನ ಸುತ್ತಿನಲ್ಲಿ ಅಮೆರಿಕದ ಸ್ಯಾಮ್ ಕ್ವಾರಿ ಅಥವಾ ಥಾಮಸ್ ಬೆಲ್ಲುಸ್ಸಿ ಅವರನ್ನು ಎದುರಿಸಲಿದ್ದಾರೆ.

ಭಾರೀ ಮಳೆ ಸುರಿದ ಕಾರಣ ಪಂದ್ಯವನ್ನು ಹೊರಾಂಗಣದಿಂದ ಸೆಂಟರ್‌ಕೋರ್ಟ್‌ನ ಮುಚ್ಚಿದ ಛಾವಣಿಗೆ ವರ್ಗಾಯಿಸಲಾಯಿತು.

ಸೆರೆನಾ, ರಾಂಡ್ವಾಂಸ್ಕಾ ಶುಭಾರಂಭ

ಲಂಡನ್, ಜೂ.29: ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಹಾಗೂ ಮೂರನೆ ಶ್ರೇಯಾಂಕಿತ ಆಟಗಾರ್ತಿ ಅಗ್ನೆಸ್ಕಾ ರಾಂಡ್ವಾಂಸ್ಕಾ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

 ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ಸ್ವಿಸ್‌ನ ಕ್ವಾಲಿಫೈಯರ್ ಅಮ್ರಾ ಸಡಿಕೊವಿಕ್‌ರನ್ನು 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ಈ ತಿಂಗಳಾರಂಭದಲ್ಲಿ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಗಾರ್ಬೈನ್ ಮುಗುರುಝ ವಿರುದ್ಧ ಸೋತ ಬಳಿಕ ಸೆರೆನಾ ಇದೇ ಮೊದಲ ಬಾರಿ ಟೆನಿಸ್ ಅಂಗಳಕ್ಕೆ ವಾಪಸಾಗಿದ್ದಾರೆ.

22ನೆ ಗ್ರಾನ್‌ಸಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಶ್ವದ 148ನೆ ರ್ಯಾಂಕಿನ ಆಟಗಾರ್ತಿ ಸಡಿಕೋವಿಕ್ ವಿರುದ್ಧ ಲಯ ಕಳೆದುಕೊಂಡಂತೆ ಕಂಡು ಬಂದರು.

ಇದೇ ವೇಳೆ, ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ರಾಂಡ್ವಾಂಸ್ಕಾ ಅವರು ಉಕ್ರೇನ್‌ನ ಕಟೆರಿನಾ ಕೊರ್ಲೊವಾರನ್ನು 6-2, 6-1 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

2012ರ ಆವೃತ್ತಿಯ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಪೊಲೆಂಡ್‌ನ ಆಟಗಾರ್ತಿ ರಾಂಡ್ವಾಂಸ್ಕಾ ವಿಂಬಲ್ಡನ್ ಟೂರ್ನಿಯಲ್ಲಿ ಈ ತನಕ ಮೊದಲ ಸುತ್ತಿನಲ್ಲಿ ಸೋತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News