×
Ad

ಗ್ರಾಪಂನಿಂದ ಮನೆ ನೆಲಸಮ: ವಿಧವೆ ಮಹಿಳೆ ಬೀದಿಪಾಲು

Update: 2016-06-29 23:41 IST

ಮಂಗಳೂರು, ಜೂ.29: ಗ್ರಾಪಂ ಅಧ್ಯಕ್ಷರ ಕುಮ್ಮಕ್ಕಿನಿಂದ ವಿಧವೆ ಮಹಿಳೆಯೊಬ್ಬರ ಮನೆಯನ್ನು ಕೆಡವಿ ಆಕೆಯನ್ನು ಬೀದಿ ಪಾಲು ಮಾಡಲಾಗಿದೆ ಎಂದು ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಪಂನ ವಿವಿಧ ಸಂಘಟನೆಗಳು ಆರೋಪಿಸಿವೆ. ಗ್ರಾಪಂನ ಶಿವಾಜಿ ನಗರದಲ್ಲಿ ಈ ಕೃತ್ಯ ನಡೆದಿದ್ದು, ಇದರ ವಿರುದ್ಧ ಸಂತ್ರಸ್ತ ಮಹಿಳೆ, ಗ್ರಾಪಂ ಸದಸ್ಯರು ಹಾಗೂ ಸುಗ್ರಾಮ ಮಹಿಳಾ ಸದಸ್ಯರು ರಾಜ್ಯ ಸರಕಾರಕ್ಕೆ ದೂರು ನೀಡಿದ್ದಾರೆ.

ಗ್ರಾಪಂ ಸದಸ್ಯೆ ವೃಂದಾ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗಂಡನನ್ನು ಕಳೆದುಕೊಂಡ ಆ ಅನಕ್ಷರಸ್ಥ ಮಹಿಳೆಗೆ ಗ್ರಾಪಂ ಮನೆ ನಿರ್ಮಿಸಿ ಕೊಡಬೇಕಾಗಿದ್ದು, ಬದಲಿಗೆ ಇದ್ದ ಮನೆಯನ್ನೂ ಕೆಡವಿ ಹಾಕಿದೆ. ಗ್ರಾಪಂ ಅಧ್ಯಕ್ಷ, ಪಿಡಿಓ ಮತ್ತು ಅವರ ಬೆಂಬಲಿಗರ ಸಮ್ಮುಖದಲ್ಲೇ ಇದು ನಡೆದಿದೆ ಎಂದು ಆರೋಪಿಸಿದ್ದಾರೆ.

15ವರ್ಷಗಳ ಹಿಂದೆ ಸರಕಾರಕ್ಕೆ ನಿವೇಶನ ರಹಿತರೆಂದು ಅರ್ಜಿ ಸಲ್ಲಿಸಿ ಈ ಜಾಗವನ್ನು ಶೇಖರ ಎಂಬವರು ಹಕ್ಕುಪತ್ರದ ಮೂಲಕ ಪಡೆದುಕೊಂಡಿದ್ದರು,ಬಳಿಕ ಶೇಖರ ಅವರು ಸರಕಾರಿ ಕೆಲಸಕ್ಕೆ ಸೇರಿಕೊಂಡ ಸಂದರ್ಭದಲ್ಲಿ ಮನೆಯಿಲ್ಲದ ಶೋಭರಿಗೆ ಅದೇ ಜಾಗದಲ್ಲಿ ಮನೆ ಕಟ್ಟಲು ಅನುಮತಿ ನೀಡಿದ್ದು, ಶೋಭಾ ಈ ಸ್ಥಳದಲ್ಲಿ ಮನೆಕಟ್ಟಲು ತಳಪಾಯ ನಿರ್ಮಿಸಿದ್ದರು . ಈ ಸಂದರ್ಭದಲ್ಲಿ ಅವರ ಗಂಡ ಮೃತಪಟ್ಟ ಕಾರಣ ಮನೆಯನ್ನು ಪೂರ್ಣಗೊಳಿಸಲು ಆಗದೆ ಅದೇ ಸ್ಥಳದಲ್ಲಿ ಸಣ್ಣ ಗುಡಿಸಲೊಂದನ್ನು ನಿರ್ಮಿಸಿ ವಾಸವಾಗಿದ್ದರು. ನಂತರ ಈ ಜಾಗವನ್ನು ಹಿಂದಿನ ಖಾತೆದಾರರಿಂದ ತನ್ನ ಹೆಸರಿಗೆ ಮಂಜೂರು ಮಾಡುವಂತೆ ಶೋಭಾ ಕಂದಾಯ ಇಲಾಖೆಗೆ 2014ರಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಿದ್ದರೂ ಇದೀಗ ಗ್ರಾಪಂ ಅಧ್ಯಕ್ಷರು ಅವುಗಳನ್ನು ಪರಿಗಣಿಸದೆ ವಿಧವೆ ಶೋಭ ವಾಸವಾಗಿದ್ದ ಮನೆಯನ್ನು ಸುರಿಯುತ್ತಿದ್ದ ಮಳೆಯ ನಡುವೆ ಕೆಡವಿದ್ದಾರೆ ಎಂದು ವೃಂದಾ ಕಿಡಿಕಾರಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ತುರ್ತು ಕ್ರಮ ಕೈಗೊಂಡು ಬೀದಿ ಪಾಲಾದ ಮಹಿಳೆಗೆ ಆಗಿರುವ ನಷ್ಟವನ್ನು ಭರಿಸಬೇಕು. ಅವರಿಗೆ ಮನೆಯನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಶಾಸಕರಿಗೆ, ಸಚಿವರಿಗೆ, ಜಿಪಂ ಸದಸ್ಯರಿಗೆ ದೂರು ನೀಡಿರುವುದಾಗಿ ಸುಗ್ರಾಮ ಸಂಘಟನೆಯ ಮುಖಂಡರೂ ಆಗಿರುವ ವೃಂದಾ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News