ಮಥುರಾ ಪಂಥಕ್ಕೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದು ಆರೆಸ್ಸೆಸ್!
ಆಗ್ರಾ, ಜೂ.30: ಸ್ವಾಧೀನ ಭಾರತ ಸುಭಾಷ್ ಸೇನಾ ಜೂನ್ 2ರಂದು ಮಥುರಾದ ಜವಾಹರ್ ಪಾರ್ಕ್‌ನಲ್ಲಿ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂರನೆ ಹಾಗೂ ಕೊನೆಯ ಪ್ರಮುಖ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈ ಹಿಂಸಾಚಾರದಲ್ಲಿ 29 ಮಂದಿ ಮೃತಪಟ್ಟಿದ್ದರು.
ಸುಭಾಷ್ ಸೇನೆಯ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದ ವೀರೇಶ್ ಯಾದವ್ ಎಂಬಾತನನ್ನು ಬಾಲಾಜಿಪುರಂನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಥುರಾಪಂಥದ ಸದಸ್ಯರಿಗೆ ಯುದ್ಧ ತರಬೇತಿ ನೀಡಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜವೀರ್ ಸಿಂಗ್ ಎನ್ನುವ ಅಂಶವನ್ನು ಬಂಧಿತ ಆರೋಪಿ ಬಾಯ್ಬಿಟ್ಟಿದ್ದಾನೆ. ಸತ್ಯಾಗ್ರಹಿಗಳಿಗೆ ಸಿಂಗ್, ಲಾಠಿ ಹಾಗೂ ದಂಡವನ್ನು ಪ್ರಯೋಗಿಸುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಅಂಶವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪಂಥದ ಮುಖ್ಯಸ್ಥರಾಗಿದ್ದ ರಾಮ್ ವೃಕ್ಷ ಯಾದವ್ ಎರಡು ಡಜನ್ ಯುವಕರ ತಂಡವನ್ನು ಸಜ್ಜುಗೊಳಿಸಿ, ಜವಾಹರ್ ಪಾರ್ಕ್ ತೆರವುಗೊಳಿಸುವ ಕಾರ್ಯಕ್ಕೆ ಪೊಲೀಸರು ಮುಂದಾದರೆ ಹೇಗೆ ಪ್ರತಿದಾಳಿ ನಡೆಸಬೇಕು ಎಂಬ ಬಗ್ಗೆಯೂ ವಿಶೇಷ ತರಬೇತಿ ನೀಡಿದ್ದರು ಎಂದು ಮಥುರಾ ವಿಶೇಷ ಎಸ್ಪಿ ಬಬ್ಲೂಕುಮಾರ್ ಪ್ರಕಟಿಸಿದ್ದಾರೆ.
ಆದರೆ ಈ ಆರೋಪವನ್ನು ಆರೆಸ್ಸೆಸ್ ಅಲ್ಲಗಳೆದಿದ್ದು, ರಾಜವೀರ್ ಸಿಂಗ್ ಎಂಬ ವ್ಯಕ್ತಿ ತಮ್ಮ ಸಂಘಟನೆಯಲ್ಲಿ ಇಲ್ಲ ಎಂದು ಹೇಳಿಕೊಂಡಿದೆ. ಆರೆಸ್ಸೆಸ್‌ಗೆ ಮುಜುಗರ ತರುವ ಸಲುವಾಗಿ ಸಮಾಜವಾದಿ ಪಕ್ಷ ಇಂಥ ಅಪಪ್ರಚಾರ ಮಾಡುತ್ತಿದೆ ಎಂದು ಆಗ್ರಾದ ಆರೆಸ್ಸೆಸ್ ವಕ್ತಾರ ಹೇಳಿದ್ದಾರೆ.
ಮಥುರಾ ಪಂಥದ ಅನುಯಾಯಿಗಳು ರಾಮ್ ವೃಕ್ಷ ಯಾದವ್ ಅವರಿಗೆ ಚಿನ್ನವನ್ನೂ ದೇಣಿಗೆ ನೀಡುತ್ತಿದ್ದರು. ಸುಮಾರು 15- 20 ಕೆಜಿ ಚಿನ್ನ ಸಂಗ್ರಹವಾಗಿತ್ತು ಎಂಬ ಅಂಶವನ್ನೂ ಯಾದವ್ ಬಹಿರಂಗಪಡಿಸಿದ್ದಾನೆ.