ಡಿ.ವಿ. ಸದಾನಂದ ಗೌಡ ಮೋದಿ ಸಂಪುಟದಿಂದ ಔಟ್ ?
ಹೊಸದಿಲ್ಲಿ, ಜೂ.30: ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನಾರಚನೆ ಜುಲೈ ಮೊದಲ ವಾರದಲ್ಲಿ ನಡೆಯಲಿದ್ದು, ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಸೇರಿದಂತೆ ಹಲವು ಸಚಿವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಹೊಸಬರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಚಿಸಿದ್ದಾರೆಂದು ತಿಳಿದು ಬಂದಿದೆ..
ಮೊದಲು ರೈಲ್ವೆ ಮಂತ್ರಿಯಾಗಿ, ಹಾಲಿ ಕಾನೂನು ಸಚಿವರಾಗಿರುವ ಡಿ.ಸದಾನಂದ ಗೌಡ ಅವರನ್ನು ಕೈಬಿಟ್ಟು ಅವರ ಸ್ಥಾನಕ್ಕೆ ಯೋಗಿ ಆದಿತ್ಯನಾಥ್ ಅವರನ್ನು ತರಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿದ್ಯ ನೀಡುವ ಸಾಧ್ಯತೆ ಇದೆ ಎಂದು ಸಿಎನ್‌ಎನ್ ಐಬಿಎನ್ ವರದಿ ಮಾಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜುಲೈ 6ರಂದು ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕೂ ಮೊದಲು ಸಚಿವ ಸಂಪುಟದ ಪುನಾರಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟದಲ್ಲಿ ಸಂಸತ್ ಸದಸ್ಯರಾದ ಗೊರಖಪುರ‍್ ರ ಯೋಗಿ ಆದಿತ್ಯನಾಥ್, ಸಹರಾನಾಪುರ‍್ ದ ರಾಘವ್ ರಖನ್‌ಪಾಲ್, ಬಿಜೆಪಿಯ ಉತ್ತರ ಪ್ರದೇಶದ ರಾಜ್ಯ ಸಮಿತಿಯ ಉಪಾಧ್ಯಕ್ಷ ಶಿವ್ ಪ್ರತಾಪ್ ಶುಕ್ಲಾ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.