ಉಳ್ಳಾಲ: ಕಡಲ್ಕೊರೆತದಿಂದ ಹಾನಿಯಾದ ಪ್ರದೇಶಗಳಿಗೆ ಸಚಿವ ಖಾದರ್ ಭೇಟಿ
ಉಳ್ಳಾಲ, ಜೂ.30: 1983ರಿಂದ ಉಳ್ಳಾಲದ ಕೋಟೆಪುರ, ಕೈಕೋ, ಮೊಗವೀರಪಟ್ಣದಲ್ಲಿ ಕಡಲ್ಕೊರೆತ ಸಂಭವಿಸುತ್ತಲೇ ಇದೆ. ಅದಕ್ಕಾಗಿ ಗಾರ್ಬನ್ ಬಾಕ್ಸ್, ಬ್ಲಾಕ್ ಹಾಕುವುದು, ಮಣ್ಣು ಹಾಕುವುದು ಮುಂತಾದ ತಾತ್ಕಾಲಿಕ ಪರಿಹಾರವನ್ನು ಸರಕಾರ ನಡೆಸುತ್ತಲೇ ಬಂದಿತ್ತು. ಆದರೆ ಇಲ್ಲಿನ ಸಮುದ್ರದ ಹೊಡೆತಕ್ಕೆ ಯಾವುದೇ ಪರಿಹಾರ ಫಲಕಾರಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಮಾದರಿಯಾದ ಎಡಿಬಿ ಯೋಜನೆಯಡಿ ಶಾಶ್ವತ ತಡೆಗೋಡೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಇದೀಗ ಉಚ್ಚಿಲ ಪ್ರದೇಶಕ್ಕೆ ಶಾಶ್ವತ ಬ್ರೇಕ್‌ವಾಟರ್ ಕಾಮಗಾರಿ ವಿಸ್ತರಣೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ವರ್ಷದಲ್ಲಿ ಅಲ್ಲಿಯೂ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ನಾಗರಿಕ ಮತ್ತು ಆಹಾರ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಕಡಲ್ಕೊರೆತಕ್ಕೊಳಗಾದ ಸೋಮೇಶ್ವರ ಉಚ್ಚಿಲದ ನ್ಯೂಉಚ್ಚಿಲ ಹಾಗೂ ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ನ. ಕೈಕೋ, ಹಿಲೇರಿಯಾನಗರಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು.
ಉಳ್ಳಾಲದಲ್ಲಿ ಮಾತ್ರ ಇದ್ದ ಕಡಲು ಕೊರೆತ ಸದ್ಯ ಸೋಮೇಶ್ವರದ ಉಚ್ಚಿಲದಲ್ಲಿಯೂ ಆರಂಭವಾಗಿದೆ. ಇಲ್ಲಿ ಬಿದ್ದಿರುವ, ಬೀಳುವ ಹಂತದಲ್ಲಿರುವ ಮನೆಗಳ ರಕ್ಷಣೆಗೆ ನಾಳೆಯಿಂದಲೇ ತಾತ್ಕಾಲಿಕ ಪರಿಹಾರ ಕಾಮಗಾರಿಯನ್ನು ಆರಂಭಿಸಲಾಗುವುದು. ನೆಲಸಮವಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.
ಶಾಶ್ವತ ತಡೆಗೋಡೆ ಕಾಮಗಾರಿಯ ಯೋಜನೆಯನ್ನು ಸೋಮೇಶ್ವರ ಉಚ್ಚಿಲ ಪ್ರದೇಶಕ್ಕೆ ವಿಸ್ತರಿಸಲು 16 ಕೋಟಿ ರೂ. ಪ್ರಸ್ತಾವನೆಯನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಲಾಗಿದೆ. ಸಿಪಿಡಬ್ಲು ಸ್ಕೀಂ ನಡಿ ಯೋಜನೆಗೆ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿಯನ್ನು ವಿಸ್ತರಿಸಲಾಗುವುದು. ಮುಂದಿನ ವರ್ಷದಲ್ಲಿ ಒಪ್ಪಿಗೆ ಸಿಗುವ ವಿಶ್ವಾಸವಿದ್ದು, ಅಲ್ಲಿಯವರೆಗೆ ತಾತ್ಕಾಲಿಕ ಪರಿಹಾರವನ್ನು ಒದಗಿಸಲಾಗುವುದು. ಅಗತ್ಯ ಬಿದ್ದಲ್ಲಿ ನಗರಸಭೆಯು ಗುರುತಿಸಿ ಇಟ್ಟಿರುವಂತಹ ಪ್ರದೇಶದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗುವುದು ಎಂದರು.
ಕಾರವಾರವರೆಗೂ ವಿಸ್ತರಣೆ
ಉಳ್ಳಾಲದಲ್ಲಿ ಶಾಶ್ವತ ಬ್ರೇಕ್ ವಾಟರ್ ಕಾಮಗಾರಿ ಯಶಸ್ವಿಗೊಂಡಲ್ಲಿ ಸುರತ್ಕಲ್, ಕಾಪು, ಕಾರವಾರದವರೆಗೂ ಕಾಮಗಾರಿಯನ್ನು ವಿಸ್ತರಿಸಲಾಗುವುದು. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕಿನ ಇಂಜಿನಿಯರ್ಸ್ ತಯಾರಿಸಿದ ರೂಪುರೇಷೆಯಂತೆ ರೂಪುರೇಷೆ ತಯಾರಿಸಲಾಗಿದೆ. ಅವರ ರೂಪುರೇಷೆಗೆ ಪುಣೆ ಸೆಂಟರಿನ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸುತ್ತದೆ. ಅಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕ ಬಳಿಕ ಕಾಮಗಾರಿ ಆರಂಭವಾಗುತ್ತದೆ. ಪುಣೆ ಸೆಂಟರಿನ ತಜ್ಞರ ಆದೇಶದಂತೆ ಕಾಮಗಾರಿ ನಡೆಸಲಾಗುತ್ತಿದೆ. ಉಳ್ಳಾಲದಲ್ಲಿ ಕಾಮಗಾರಿ ಯಶಸ್ವಿಗೊಂಡಲ್ಲಿ ಸುರತ್ಕಲ್, ಕಾಪು ಹಾಗೂ ಕಾರವಾರದವರೆಗೂ ಯೋಜನೆ ವಿಸ್ತರಣೆಯಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ ಪ್ರಾಕೃತಿಕ ವಿಕೋಪ ಪರಿಹಾರಕ್ಕಾಗಿ ಸರಕಾರಕ್ಕೆ 5 ಕೋಟಿ ರೂ. ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಉಳ್ಳಾಲ ಮತ್ತು ಉಚ್ಚಿಲ ಭಾಗದಲ್ಲಿ ಪರಿಹಾರ ಕಾಮಗಾರಿ ಇಂದಿನಿಂದಲೇ ಆರಂಭವಾಗಲಿದೆ. ತುರ್ತು ಅವಶ್ಯಕತೆ ಇದ್ದಲ್ಲಿ ತಕ್ಷಣ ಅವರಿಗೆ ಬದಲಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಈ ಸಂದರ್ಭ ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು, ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್, ನಗರಸಭೆಯ ಪೌರಾಯುಕ್ತೆ ರೂಪಾ ಟಿ.ಶೆಟ್ಟಿ, ಸದಸ್ಯರಾದ ಮುಸ್ತಫಾ ಅಬ್ದುಲ್ಲಾ, ಪೊಡಿಮೋನು, ಕಾಂಗ್ರೆಸ್ ಮುಖಂಡರಾದ ಈಶ್ವರ್ ಉಳ್ಳಾಲ್, ಸಂತೋಷ್ ಶೆಟ್ಟಿ, ಸಿರಾಜ್ ಕಿನ್ಯಾ, ಸುರೇಶ್ ಭಟ್ನಗರ, ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ಎಸ್. ರಾಥೋಡ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಡೊಳ್ಳಿ, ಲೋಕೇಶ್ವರ್, ಉಳ್ಳಾಲ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.