ಹೆರಿಗೆ ನೋವಿನ ನಡುವೆಯೇ ತನ್ನ ಮಗುವಿನ ಜನನದ ಕ್ಷಣಗಳನ್ನು ಸೆರೆ ಹಿಡಿದ ಫೊಟೋಗ್ರಾಫರ್ !

Update: 2016-06-30 09:18 GMT

ಕ್ಯಾಲಿಫೋರ್ನಿಯಾ, ಜೂ.30: ಹೆರಿಗೆ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು ಅಪಾರ. ಇಂತಹ ತೀವ್ರ ನೋವಿನ ನಡುವೆಯೇ ಕ್ಯಾಲಿಫೋರ್ನಿಯಾದ ಛಾಯಾಗ್ರಾಹಕಿಯೊಬ್ಬರು ತಮ್ಮ ಮಗುವಿನ ಜನನದ ಕ್ಷಣಗಳನ್ನು ಸೆರೆ ಹಿಡಿದು ವಿಶ್ವವನ್ನು ನಿಬ್ಬೆರಗಾಗಿಸಿದ್ದಾರೆ.

ಮದುವೆ ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿ ಪರಿಣತೆಯಾಗಿರುವ ಲಿಸಾ ರಾಬಿನ್ಸನ್ ವಾರ್ಡ್ ತನ್ನ ಪುತ್ರಿ ಅನೋರಾಗೆ ಜನ್ಮ ನೀಡುವ ಸಂದರ್ಭ ಸ್ವತಃ ಹಲವಾರು ಅತ್ಯಪರೂಪದ ಫೊಟೋಗಳನ್ನು ತೆಗೆದಿದ್ದಾರೆ. ‘‘ನನಗೆ ಫೋಟೊಗಳನ್ನು ತೆಗೆಯಲು ಸಾಧ್ಯವೇ ಎಂಬ ಬಗ್ಗೆ ನನಗೇ ಸಂಶಯವಿತ್ತು,’’ ಎಂದು ಹೇಳುವ ಲಿಸಾ ‘‘ನನಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ನಮ್ಮ ಸಾಮಗ್ರಿ ಹಾಗೂ ಕ್ಯಾಮರಾದೊಂದಿಗೆ ಆಸ್ಪತ್ರೆಗೆ ಧಾವಿಸಿದೆವು. ಅಲ್ಲಿಗೆ ಹೋದಾಗ ನಾನು ನೋವಿನಿಂದ ನಡುಗುತ್ತಿದ್ದೆ. ಕ್ಯಾಮರಾ ಕೈಯಲ್ಲಿ ಹಿಡಿಯಲು ಸಾಧ್ಯವೇ ಎಂದು ನನಗೆ ಯೋಚನೆಯಾಗಿತ್ತು. ಆದರೆ ನೋವು ಸ್ವಲ್ಪ ಕಡಿಮೆಯಾದಾಗಲೆಲ್ಲಾ ನನ್ನ ಸುತ್ತ ನನಗೆ ಕಂಡಿದ್ದನ್ನು ನಾನು ಸೆರೆ ಹಿಡಿದೆ,’’ಎನ್ನುತ್ತಾರೆ.

‘‘ನನ್ನ ಕೈಯ್ಯಲ್ಲಿದ್ದ ಕ್ಯಾಮರಾ ನೋಡಿ ವೈದ್ಯರಿಗೇ ಆಶ್ಚರ್ಯವಾಗಿತ್ತು. ನಾನು ಕ್ಯಾಮರಾವನ್ನು ಯಾವುದಕ್ಕಾದರೂ ಫೋಕಸ್ ಮಾಡಬಹುದೇ ಎಂಬ ಬಗ್ಗೆಯೂ ನನಗೆ ಸಂಶಯವಿತ್ತು. ನನ್ನ ಶಿಶು ಈ ಜಗತ್ತು ಪ್ರವೇಶಿಸುತ್ತಿದ್ದಂತೆಯೇ ಆಕೆಯ ಫೊಟೋ ತೆಗೆಯಲು ನಾನು ಯಶಸ್ವಿಯಾದೆ’’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಲಿಸಾ.

‘‘ಈ ಫೊಟೋಗಳನ್ನು ನೋಡಿದಾಗಲೆಲ್ಲಾ ನನ್ನ ಹೆರಿಗೆ ಅನುಭವ ಮರುಕಳಿಸುತ್ತಿದೆ, ನನ್ನ ಪುತ್ರಿ ಹುಟ್ಟಿದ ಆ ಕ್ಷಣವನ್ನು ಮರೆಯಲಾರೆ’’ಎನ್ನುತ್ತಾರೆ ಆಕೆ. ಮಗು ಹುಟ್ಟಿದಾಕ್ಷಣ ನನ್ನ ಪತಿಯ ಮುಖ ನೋಡಿದೆ. ಅವರ ಕಣ್ಣಲ್ಲಿ ಆನಂದಬಾಷ್ಪವಿತ್ತು,’’ಎಂದರು ಆಕೆ. ‘‘ನನ್ನ ಮಗು ಅದ್ಭುತವಾಗಿದ್ದಾಳೆ. ಆಕೆ ಸಂತಸದ ಸಾಕಾರಮೂರ್ತಿಯಾಗಿದ್ದಾಳೆ,’’ಎಂದು ಬಣ್ಣಿಸುತ್ತಾರೆ ಲಿಸಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News