ಶಾಲಾ ವಾಹನಗಳ ನಿಯಮದ ಬಗ್ಗೆ ಶೀಘ್ರವೇ ಜಿಲ್ಲಾಡಳಿತದೊಂದಿಗೆ ಚರ್ಚೆ: ಆರ್‌ಟಿಒ

Update: 2016-06-30 10:30 GMT

ಮಂಗಳೂರು, ಜೂ.29: ಶಾಲಾ ವಾಹನಕ್ಕೆ ಸಂಬಂಧಿಸಿ ಜಿಲ್ಲಾಡಳಿತದೊಂದಿಗೆ ಶೀಘ್ರವೆ ಮಾತುಕತೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗ್ಡೆ ಹೇಳಿದರು.

ಅವರು ಇಂದು ನಗರ ಡಾನ್‌ಬಾಸ್ಕೋ ಸಭಾಂಗಣದಲ್ಲಿ ದ.ಕ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ ಆಯೋಜಿಸಿದ ಶಾಲಾ ಮಕ್ಕಳ ವಾಹನ ಚಾಲಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ವಾಹನ ಚಾಲಕರ ಬೇಡಿಕೆಯಾಗಿರುವ ಶಾಲಾ ಮೈದಾನದಲ್ಲಿ ಶಾಲಾ ಮಕ್ಕಳ ವಾಹನಕ್ಕೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳ ಸುರಕ್ಷತಾ ಕಾವಲು ಸಮಿತಿ ರಚನೆಗೆ ಸಂಬಂಧಿಸಿದಂತೆ ಈಗಾಗಲೆ ನಿರ್ದೇಶನ ನೀಡಲಾಗಿದೆ. ಹೆತ್ತವರ, ಶಾಲಾ ವಾಹನ ಚಾಲಕರ ಮತ್ತು ಶಾಲಾ ಮಂಡಳಿಯ ಜಂಟಿ ಸಭೆಯನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಲಾ ವಾಹನವಾದ ರಿಕ್ಷಾದಲ್ಲಿ ಹತ್ತು ಮಕ್ಕಳನ್ನು, ಓಮ್ನಿಯಲ್ಲಿ 15 ಮಕ್ಕಳನ್ನು ಕೂರಿಸಲು ಸಾಧ್ಯವಿಲ್ಲ. ರಿಕ್ಷಾದಲ್ಲಿ 6 ಮಕ್ಕಳನ್ನು ಮಾತ್ರ ಕೂರಿಸಬಹುದು. ವಾಹನದಲ್ಲಿ ಹೆಚ್ಚು ಮಕ್ಕಳಿದ್ದರೆ ಮಕ್ಕಳ ಬಗ್ಗೆ ವೈಯಕ್ತಿವಾಗಿ ಗಮನ ಕೊಡಲು ಚಾಲಕರಿಗೆ ಸಾಧ್ಯವಿಲ್ಲ. ಸುರಕ್ಷತೆಗೆ ಮೊದಲ ಆದ್ಯತೆಯನ್ನು ಕೊಟ್ಟು ಸುತ್ತೋಲೆ ಪ್ರಕಾರ ಶಾಲಾ ವಾಹನದಲ್ಲಿ ಮಕ್ಕಳನ್ನು ಕೂರಿಸಬೇಕು ಎಂದು ಹೇಳಿದರು.

ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ವಾಹನ ಚಾಲಕರು ಪ್ರತಿ ಕ್ಷಣವು ಎಚ್ಚರ ವಹಿಸಬೇಕು.ಅದರಲ್ಲಿಯೂ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಚಾಲಕರು ಅತಿ ಎಚ್ಚರಿಕೆಯನ್ನು ವಹಿಸಬೇಕು. ಶಾಲಾ ವಾಹನ ಚಾಲಕರು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಓವರ್‌ಟೇಕ್ ಮಾಡಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಸುನಿಲ್ ಕುಮಾರ್ ಬಜಾಲ್, ಉಮೇಶ್ ಶೆಟ್ಟಿ, ಸತೀಶ್ ಪೂಜಾರಿ, ಚಿತ್ತರಂಜನ್ ಕುಮಾರ್, ಕುಮಾರ್ ಮಾಲೇಮಾರ್, ಮೋಹನ್ ಅತ್ತಾವರ, ಮುಹಮ್ಮದ್ ಅನ್ಸರ್, ಜಯರಾಂ, ಲೋಕೇಶ್, ಪ್ರಶಾಂತ್ ಆಳ್ವ, ಗಂಗಾಧರ , ದಯಾನಂದ ಅತ್ತಾವರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News