ಭಾರತೀಯ ಅಮೆರಿಕನ್ ವಿಜ್ಞಾನಿಯಿಂದ 75 ಕೋಟಿ ರೂ. ದೇಣಿಗೆ
ವಾಶಿಂಗ್ಟನ್, ಜೂ. 30: ಭಾರತೀಯ ಅಮೆರಿಕ ಭೌತ ವಿಜ್ಞಾನಿಯೊಬ್ಬರು ಪ್ರಕೃತಿಯ ಮೂಲ ನಿಯಮಗಳ ತಿಳುವಳಿಕೆಯನ್ನು ಹೆಚ್ಚಿಸುವುದಕ್ಕೆ ಮೀಸಲಾಗಿರುವ ಸಂಸ್ಥೆಯೊಂದನ್ನು ಸ್ಥಾಪಿಸಲು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯಕ್ಕೆ 11 ಮಿಲಿಯ ಡಾಲರ್ (ಸುಮಾರು 75 ಕೋಟಿ ರೂಪಾಯಿ) ದೇಣಿಗೆ ನೀಡಿದ್ದಾರೆ.
‘‘ಮಣಿ ಭೌಮಿಕ್‌ರ ಉದಾರ ದೇಣಿಗೆಗೆ ಮತ್ತು ನಮ್ಮ ವಿಶ್ವವಿದ್ಯಾನಿಲಯದ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’’ ಎಂದು ವಿಶ್ವವಿದ್ಯಾನಿಲಯದ ಚಾನ್ಸಲರ್ ಜೀನ್ ಬ್ಲಾಕ್ ಹೇಳಿದರು.
ಬಡತನವನ್ನು ಮೀರಿ ಬೆಳೆದ ಭೌಮಿಕ್ ಶ್ರೇಷ್ಠ ವಿಜ್ಞಾನಿಯಾದರು. ಕಣ್ಣಿನ ಲೇಸರ್ ಶಸ್ತ್ರಚಿಕಿತ್ಸೆ ವಿಧಾನಕ್ಕೆ ಕಾರಣವಾದ ಲೇಸರ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಅವರು ಪ್ರಧಾನ ಪಾತ್ರವನ್ನು ವಹಿಸಿದ್ದಾರೆ.
ಪಶ್ಚಿಮ ಬಂಗಾಳದ ಕುಗ್ರಾಮವೊಂದರಲ್ಲಿ ಹುಟ್ಟಿದ ಅವರು ಹುಲ್ಲು ಹಾಸಿದ ಮಣ್ಣಿನ ಮನೆಯಲ್ಲಿ ತಂದೆ-ತಾಯಿಗಳು ಮತ್ತು ಆರು ಸಹೋದರ-ಸಹೋದರಿಯರೊಂದಿಗೆ ಬೆಳೆದವರು.
‘‘ಹದಿನಾರು ವರ್ಷದವರೆಗೆ ನನ್ನಲ್ಲಿ ಒಂದು ಶೂ ಕೂಡ ಇರಲಿಲ್ಲ. ಶಾಲೆಗೆ ಬರಿಗಾಲಿನಲ್ಲೆ ನಾಲ್ಕು ಮೈಲಿ ನಡೆದುಕೊಂಡು ಹೋಗಿ ಬರುತ್ತಿದ್ದೆ’’ ಎಂದು ವಿಶ್ವವಿದ್ಯಾನಿಲಯದ ಹೇಳಿಕೆಯಲ್ಲಿ ಭೌಮಿಕ್ ಹೇಳಿದ್ದಾರೆ.
1958ರಲ್ಲಿ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರಗಪುರದಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು.
1959ರಲ್ಲಿ ಭೌಮಿಕ್, ಸ್ಲೋನ್ ಫೌಂಡೇಶನ್ ಪೋಸ್ಟ್‌ಡಾಕ್ಟೋರಲ್ ಫೆಲೋಶಿಪ್ ಕಾರ್ಯಕ್ರಮದಡಿ ‘‘ಕಿಸೆಯಲ್ಲಿ 3 ಡಾಲರ್ ಇಟ್ಟುಕೊಂಡು’’ ಅಮೆರಿಕಕ್ಕೆ ಬಂದರು. ಅವರ ಹಳ್ಳಿಯ ಜನರು ಅವರ ವಿಮಾನ ಟಿಕೆಟ್‌ಗಾಗಿ ಹಣ ಸಂಗ್ರಹಿಸಿದರು ಎಂದು ಹೇಳಿಕೆ ತಿಳಿಸಿದೆ.