×
Ad

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿ:ಸ್ಪಷ್ಟ ನಿರ್ಧಾರಕ್ಕೆ ಬಾರದ ಔಪಚಾರಿಕ ಸಭೆ

Update: 2016-06-30 21:06 IST

ಬಂಟ್ವಾಳ, ಜೂ.30: ಪುರಸಭಾ ವ್ಯಾಪ್ತಿಯಲ್ಲಿ ಅಸಮರ್ಪಕ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯ ಬಳಿಕ ಗುತ್ತಿಗೆದಾರನ ಉಪಸ್ಥಿತಿಯಲ್ಲಿ ನಡೆದ ಔಪಚಾರಿಕ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತಾದರೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಾರದೇ ಸಭೆ ವಿಫಲವಾದ ಪ್ರಸಂಗ ಮಂಗಳವಾರ ಬಂಟ್ವಾಳ ಪುರಸಭೆಯಲ್ಲಿ ನಡೆದಿದೆ.

ಪುರಸಭಾ ವ್ಯಾಪ್ತಿಯಲ್ಲಿ ಅಸಮರ್ಪಕ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪುರಸಭೆಯಿಂದ ಶೋಕಾಸ್ ನೋಟೀಸ್ ನೀಡಲಾಗಿದ್ದು, ಅದಕ್ಕವರು ಸಮಜಾಯಿಷಿ ನೀಡಿದ್ದರಾದರೂ, ಕಸವಿಲೇವಾರಿ ಮಾತ್ರ ಇನ್ನೂ ಕೂಡಾ ತೃಪ್ತಿಕರವಾಗಿಲ್ಲ. ಹಾಗಾಗಿ ಅವರಿಗೆ ಮತ್ತೊಂದು ನೋಟಿಸು ಜಾರಿಗೊಳಿಸಲಾಗಿದೆ ಎಂದು ಸಭೆಗೆ ತಿಳಿಸಿದ ಮುಖ್ಯಾಧಿಕಾರಿ ಸುಧಾಕರ್, ಪುರಸಭಾ ವ್ಯಾಪ್ತಿಯಲ್ಲಿ ಶೇ.100ರಷ್ಟು ಮನೆ ಮನೆ ಕಸ ಸಂಗ್ರಹವಾಗಬೇಕೆಂಬ ಉದ್ದೇಶ ಇನ್ನೂ ಕೂಡಾ ಸಾಧ್ಯವಾಗಿಲ್ಲ ಎಂದು ಈ ಸಂದರ್ಭದಲ್ಲಿ ಗುತ್ತಿಗೆದಾರನ ಗಮನಕ್ಕೆ ತಂದರು.

ಕೆಲವು ವಾರ್ಡುಗಳಿಗೆ ಕಸಸಂಗ್ರಹಣೆಗೆ ಬರುತ್ತಿಲ್ಲ. ಕೆಲವು ಕಸ ಸಂಗ್ರಹಕಾರರು ಜನರೊಂದಿಗೆ ಹಾಗೂ ಸದಸ್ಯರೊಂದಿಗೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ದೂರಿದ ಸದಸ್ಯರು, ಘನತ್ಯಾಜ್ಯ ಸಂಗ್ರಹವಾಗುವ ಕೊಟ್ರಮಣಗಂಡಿ, ಬಾಮಿ ಜಂಕ್ಷನ್, ಬಿ.ಸಿ.ರೋಡು ಬಸ್ಸು ನಿಲ್ದಾಣದ ಹಿಂಭಾಗ, ರೈಲ್ವೇ ನಿಲ್ದಾಣದ ಬಳಿ ಸೇರಿದಂತೆ ಅಯಕಟ್ಟಿನ ಜಾಗದಲ್ಲಿ ಮಂಗಳೂರು ಸಹಾಯಕ ಕಮೀಷನರ್ ನೀಡಿರುವ ಸೂಚನೆಯಂತೆ ಸಿಸಿ ಕ್ಯಾಮರಾ ಅಳವಡಿಸಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುವಂತೆ ಸದಸ್ಯರು ಆಗ್ರಹಿಸಿದರು.

ಇದೇ ವೇಳೆ ಅಧ್ಯಕ್ಷ ರಾಮಕೃಷ್ಣ ಆಳ್ವ ಕೂಡ ಮಂಗಳವಾರ ಬೆಳಗ್ಗೆ ಮೆಲ್ಕಾರ್ ಕಡೆಯಿಂದ ತಾನು ಬರುತ್ತಿದ್ದಾಗ ರಸ್ತೆಬದಿ ಕಸದ ರಾಶಿ ಇರುವುದನ್ನು ಕಣ್ಣಾರೆ ಕಂಡಿರುವುದಾಗಿ ಗುತ್ತಿಗೆದಾರ ಎಮ್ಮೆಕೆರೆ ಸಲಾಂರ ಗಮನ ಸೆಳೆದು ತನ್ನ ಅಸಮಾಧಾನ ವ್ಯಕ್ತಪಡಿಸಿದರು.

ಗುತ್ತಿಗೆದಾರ ಎಮ್ಮೆಕೆರೆ ಸಲಾಂ ಮಾತನಾಡಿ, ಮನೆ ಮನೆ ಕಸ ಸಂಗ್ರಹಕ್ಕೆ ಸಂಬಂಧಿಸಿದ ಕೆಲವರು ಇನ್ನೂ ಕೂಡ ಶುಲ್ಕವನ್ನು ಪಾವತಿಸಿಲ್ಲ. ಕೆಲವೊಂದು ಕಾರಣಗಳಿಂದ ಸಿಬ್ಬಂದಿ ಕಡಿಮೆ ಇರುತ್ತಾರೆ. ಜನಸಾಮಾನ್ಯರು ಹಾಗೂ ಆಯಾಯಾ ವಾರ್ಡಿನ ಸದಸ್ಯರು ಸಹಕರಿಸುವಂತೆ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News