ಲಕ್ಷವೃಕ್ಷ ಆಂದೋಲನದಡಿ 2 ಕೋಟಿಗೂ ಅಧಿಕ ಗಿಡ ನೆಡಲು ನಿರ್ಧಾರ: ಸಚಿವ ರೈ
ಬಂಟ್ವಾಳ, ಜೂ. 30: ಲಕ್ಷವೃಕ್ಷ ಆಂದೋಲನದಡಿ ರಾಜ್ಯದಲ್ಲಿ ಪ್ರಸ್ತುತ ವರ್ಷ ಒಂದು ವಾರದ ಕಾರ್ಯಕ್ರಮದಲ್ಲಿ 2 ಕೋಟಿಗೂ ಅಧಿಕ ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ಬಿ.ರಮನಾಥ ರೈ ತಿಳಿಸಿದರು.
ಅವರು ನರಿಕೊಂಬು ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ಸಭಾಂಗಣದಲ್ಲಿ ನಡೆದ ವರುಷದ ಹರುಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜುಲೈ 2ರಿಂದ ಜುಲೈ 10ರವರೆಗೆ ಈ ಅಭಿಯಾನ ನಡೆಯಲಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿಯವರ ಮುಖಾಂತರವೇ ಎಲ್ಲ ಪಂಚಾಯತ್‌ಗಳಿಗೆ ವಿಜ್ಞಾಪನ ಪತ್ರವನ್ನು ಕಳುಹಿಸಿಕೊಡಲಾಗಿದೆ ಎಂದರು.
ಮನುಷ್ಯ ಬದುಕುವುದೇ ಕಷ್ಟ ಎನ್ನುವ ರೀತಿಯಲ್ಲಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಹವಾಮಾನ ವೈಪರಿತ್ಯ, ಮಳೆಯ ಪ್ರಮಾಣದಲ್ಲಿ ಇಳಿಕೆ ಮೊದಲಾದ ಸಮಸ್ಯೆಗಳು ಈಗಾಗಲೆ ಕಾಣಿಸಿಕೊಂಡಿದ್ದು, ಪರಿಸರ ರಕ್ಷಣೆಯೊಂದಿಗೆ ವನ್ಯಜೀವಿಗಳ ರಕ್ಷಣೆ, ಅರಣ್ಯ ಸಂಪತ್ತುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬನ ಜವಬ್ದಾರಿಯಾಗಿದೆ ಎಂದರು.
ಇದಕ್ಕೆ ಮುಂಚಿತವಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭೀಮಗದ್ದೆ ರಸ್ತೆ ಕಾಂಕ್ರೀಟಿಕರಣ ಹಾಗೂ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಾಣಿಮಜಲು ವೀರಮಾರುತಿ ವ್ಯಾಯಮ ಶಾಲೆ ಬಳಿಯ ರಸ್ತೆ ಕಾಂಕ್ರೀಟಿಕರಣವನ್ನು ಉದ್ಘಾಟಿಸಿದರು. ಬಳಿಕ ಪಂಚಾಯತ್ ಕಚೇರಿ ಬಳಿ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯೆ ಗಾಯತ್ರಿ ರವೀಂದ್ರ ಸಫಲ್ಯ, ಪಿಡಿಒ ಗಿರಿಜಾ, ಪ್ರಮುಖರಾದ ಉಮೇಶ್ ಬೋಳಂತೂರು, ಆನಂದ ಸಾಲ್ಯಾನ್, ಪದ್ಮನಾಭ ಮಯ್ಯ, ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ ಹಾಗೂ ಎಲ್ಲ ಪಂಚಾಯತ್ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಟ್ರಾಫಿಕ್ ಎಸೈ ಚಂದ್ರಶೇಖರಯ್ಯ, ಸಿಡಿಪಿಒ ಪುಷ್ಪಲತಾ, ಮೆಸ್ಕಾಂ ಜೆಇ ಲೋಕೇಶ್ ಹಾಗೂ ಸಿವಿಲ್ ಗುತ್ತಿಗೆದಾರ ಲತೀಫ್, ನಾಗೇಶ್, ಶೈಲೇಶ್‌ರನ್ನು ಸನ್ಮಾನಿಸಲಾಯಿತು. ವಸಂತ ಭೀಮಗದ್ದೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.