ಮಾದಕ ದ್ರವ್ಯ ಪಿಡುಗಿನ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು: ಸಚಿವ ಖಾದರ್
ಉಳ್ಳಾಲ,ಜೂ.30: ರಸ್ತೆಯಲ್ಲಿ ನಡೆದುಕೊಂಡು ಹೋಗುವ ಅಮಾಯಕನ ಕೊಲೆ ನಡೆಯುವುದಾದರೆ ಅದು ಮಾದಕ ವಸ್ತುಗಳ ಸೇವನೆಯಿಂದಾಗಿದೆ. ತಂಬಾಕು ಚಟಕ್ಕೆ ಆಕರ್ಷಿತರಾದವರು ಹಾಗೂ ಆಕರ್ಷಣೆ ಹೊಂದುತ್ತಿರುವ ವಿದ್ಯಾರ್ಥಿಗಳು ಅದರಿಂದ ತಾನು ಸಂಪೂರ್ಣ ದೂರವಿದ್ದು, ಸಮುದಾಯಕ್ಕೂ ಈ ಬಗ್ಗೆ ಅರಿವು ಮೂಡಿಸುವ ದೃಢ ತೀರ್ಮಾನ ತೆಗೆದುಕೊಳ್ಳಬೇಕು. ಈ ಪಿಡುಗಿನ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ವಿಭಾಗದ ಸಹಭಾಗಿತ್ವದಲ್ಲಿ ತೊಕ್ಕೊಟ್ಟು ಖಾಸಗಿ ಸಭಾಂಗಣದಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಹಾಗೂ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಗರೇಟ್‌ನಂತಹ ಹೊಗೆಬತ್ತಿ ಸೇದಿದ ಯಾರೂ ಇದುವರೆಗೆ ದೊಡ್ಡ ಜನ ಎನಿಸಿಲ್ಲ, ಮುಂದಕ್ಕೆ ಎನಿಸುವುದೂ ಇಲ್ಲ, ಸಿಗರೇಟ್, ಮಾದಕ ಪದಾರ್ಥ ನೀಡಲು ಸಾಕಷ್ಟು ಜನ ಇರುತ್ತಾರೆ. ಆಸ್ಪತ್ರೆಯ ಐಸಿಯುನಲ್ಲಿ ಮಲಗಿದಾಗ ಕುಟುಂಬಸ್ಥರು ಮಾತ್ರ ಇರುತ್ತಾರೆ. ಆದ್ದರಿಂದ ದುಶ್ಚಟದಿಂದ ದೂರವಿದ್ದರೆ ಉತ್ತಮ ಎಂದು ಹೇಳಿದರು.
ಉಳ್ಳಾಲ ಠಾಣೆಯ ನಿರೀಕ್ಷಕ ಶಿವಪ್ರಕಾಶ್ ಮಾತನಾಡಿ, ಹಲವಾರು ವಿಧದಲ್ಲಿ ಮಾದಕ ದ್ರವ್ಯವಿದ್ದು ಬೀಡಿ, ಸಿಗರೇಟ್, ಗುಟ್ಕಾ ಮಾತ್ರ ಎಂದು ಭಾವಿಸಬಾರದು. ಮಾದಕ ವಸ್ತುವಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿಶ್ವವ್ಯಾಪಿ ಕಾರ್ಯಕ್ರಮ ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಪ್ರತೀ ಶಾಲೆಗೆ ಭೇಟಿ ನೀಡುವುದು ಅಸಾಧ್ಯವಾಗಿರುವುದರಿಂದ ಒಂದೆಡೆ ಸೇರಿಸಿ ಕಾರ್ಯಕ್ರಮ ನಡೆಸಲಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರು, ಪರಿಸರವಾಸಿಗಳಿಗೆ ವಿದ್ಯಾರ್ಥಿಗಳು ತಿಳಿ ಹೇಳಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಮಾತನಾಡಿ, ರಾಜ್ಯದ 50 ಶೇ. ಯುವಜನತೆ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದು, 10 ಶೇ. ಯುವಜನತೆ ವ್ಯಸನಿಗಳಾಗಿದ್ದಾರೆ ಎಂದು ಪತ್ರಿಕೆಯೊಂದರಲ್ಲಿ ಬಂದಿರುವ ವರದಿ ಅತ್ಯಂತ ಗಂಭೀರವಾಗಿದೆ. ಹೆತ್ತವರು ಸರಿಯಾಗಿದ್ದರೆ ಮಕ್ಕಳೂ ಸರಿಯಾಗಿರುತ್ತಾರೆ ಎಂದರು.
ಎಸಿಪಿ ಕಲ್ಯಾಣ್ ಶೆಟ್ಟಿ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ವಿಭಾಗದ ಡಾ.ಶ್ರೀನಿವಾಸ ಭಟ್, ಹೆಲ್ಪ್ ಇಂಡಿಯಾ ಫೌಂಡೇಶನ್ ಉಪಾಧ್ಯಕ್ಷ ಉಮರ್ ಫಾರೂಕ್, ಸದಸ್ಯ ಇಸ್ಮಾಯೀಲ್, ಸ್ಥಾಪಕ ರಾಝಿಕ್ ಉಳ್ಳಾಲ್, ಹೈದರ್ ಪರ್ತಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯ ಶಕೀಲ್ ತುಂಬೆ ಸ್ವಾಗತಿಸಿದರು.