×
Ad

ಮರಳು ಮಾಫಿಯಾಗಳ ಗೂಂಡಾಗಿರಿ: ಮೂವರು ಆಸ್ಪತ್ರೆಗೆ

Update: 2016-06-30 23:58 IST

ಮಂಜೇಶ್ವರ, ಜೂ.30: ಮರಳು ಮಾಫಿಯಾ ತಂಡವೊಂದು ಮನೆಗೆ ನುಗ್ಗಿ ಮೂವರನ್ನು ಮಾರಣಾಂತಿಕವಾಗಿ ಹಲ್ಲೆಗೈದು ಗಾಯಗೊಳಿಸಿ ಬಳಿಕ ಮಸೀದಿಯಿಂದ ನಮಾಜು ಮುಗಿಸಿ ಹಿಂತಿರುಗುತ್ತಿದ್ದ ಆಲ್ಟೋ ಕಾರು ಹಾಗೂ ಬೈಕನ್ನು ಹಾನಿಗೈದು ಹಲ್ಲೆಗೊಳಿಸಿ ಮಸೀದಿ ಆವರಣದೊಳಗೆ ಆಕಾಶಕ್ಕೆ ಗುಂಡು ಹಾರಿಸಿ ಆತಂಕ ಮೂಡಿಸಿದ ಘಟನೆ ಗಡಿ ಪ್ರದೇಶ ಪಾತೂರು ಸನಿಹ ತಲೆಕ್ಕಿ ಮಜಿಬೈಲಿನ ಬೋಲ್ಮಾರ್ ಎಂಬಲ್ಲಿ ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ.
ಅಲ್ಲಿಯ ನಿವಾಸಿಗಳಾದ ಶರೀಫ್ ಹಾಗೂ ರಫೀಕ್‌ನ 25 ಮಂದಿಯನ್ನೊಳಗೊಂಡ ಮರಳು ಮಾಫಿಯಾ ತಂಡ ಈ ಕೃತ್ಯದ ಹಿಂದಿರುವುದು ತನಿಖೆಯಿಂದ ತಿಳಿದು ಬಂದಿದೆೆ.ಲಾರಿ ಕ್ಲೀನರ್ ಆಗಿರುವ ಸ್ಥಳೀಯ ನಿವಾಸಿ ಮಜೀದ್(28) ರವರ ಮನೆಗೆ ಮುಂಜಾನೆ ನುಗ್ಗಿದ ತಂಡ ಮಾರಕಾಯುಧಗಳಿಂದ ಮಜೀದ್, ಅವರ ಪತ್ನಿ ಫೌಝಿಯಾ ಹಾಗೂ ತಾಯಿ ನಬೀಸಾರನ್ನು ಗಾಯಗೊಳಿಸಿದೆ. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯ ವೇಳೆ ಮನೆಯ ಕಿಟಕಿ ಗಾಜುಗಳನ್ನು ಪುಡಿಮಾಡಲಾಗಿದ್ದು, ದಾಳಿಕೋರರು ಮರಳುವಾಗ, ಮಸೀದಿಯಿಂದ ಆಗಮಿಸುತ್ತಿದ್ದ ಮಜೀದ್ ಹಾಗೂ ಅಝೀಝ್ ಎಂಬವರಿಗೂ ಹಲ್ಲೆಗೊಳಿಸಿದ್ದಾರೆ. ಬಳಿಕ ಮಸೀದಿ ಪರಿಸರದ ಸಿದ್ದೀಕ್‌ರವರ ಕಾರು ಹಾಗೂ ಅಶ್ರಫ್‌ರವರ ಬೈಕ್‌ನ್ನು ಹಾನಿಗೊಳಿಸಲಾಗಿದೆ. ಬಳಿಕ ತಂಡ ಮಸೀದಿಯ ಆವರಣದೊಳಗೆ ನುಗ್ಗಿ ತಮ್ಮ ರಿವಾಲ್ವರ್ ನಿಂದ ಆಕಾಶಕ್ಕೆ ಗುಂಡು ಹಾರಿಸಿ ಆತಂಕ ಸೃಷ್ಟಿಸಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.
 ಈ ಪ್ರದೇಶದಲ್ಲಿ ವ್ಯಾಪಕ ಮರಳು ದಂಧೆ ನಡೆಯುತ್ತಿದ್ದು ಇದಕ್ಕೆ ಎದುರಾಗಿ ವರ್ತಿಸುವವರ ಸದ್ದಡಗಿಸಲು ಮರಳು ಮಾಫಿಯಾಗಳು ನಡೆಸಿದ ದಾಳಿಯಿದೆಂದು ಸ್ಥಳೀಯರು ತಿಳಿಸಿದ್ದಾರೆ.ಈ ಘಟನೆಯ ಬಳಿಕ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಆರೋಪಿಗಳನ್ನು ಹಿಡಿದು ಬಳಿಕ ಈ ಪ್ರದೇಶ ತಮ್ಮ ವ್ಯಾಪ್ತಿಗೆ ಬರುತ್ತಿಲ್ಲವೆಂಬ ಕಾರಣ ನೀಡಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News