ರಾಯ್ ಭರ್ಜರಿ ಶತಕ; ಆಂಗ್ಲರಿಗೆ ಜಯ
ಲಂಡನ್, ಜೂ.30: ಆರಂಭಿಕ ದಾಂಡಿಗ ಜೇಸನ್ ರಾಯ್ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಗಳಿಸಿದೆ.
ಓವಲ್ ಕ್ರೀಡಾಂಗಣದಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಗೆಲುವಿಗೆ 306 ರನ್‌ಗಳ ದೊಡ್ಡ ಸವಾಲನ್ನು ಪಡೆದಿದ್ದ ಇಂಗ್ಲೆಂಡ್ ತಂಡ ಡಕ್‌ವರ್ತ್/ಲೂಯಿಸ್ ನಿಯಮದಂತೆ 42 ಓವರ್‌ಗಳಲ್ಲಿ 309 ರನ್ ಗಳಿಸಿ ಸತತ ಎರಡನೆ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಲಂಕೆಯ ಬ್ಯಾಟಿಂಗ್‌ಗೆ ಮಳೆ ಪಡಿಸಿತ್ತು. ಹೀಗಾಗಿ ಎಂಟು ಓವರ್‌ಗಳು ಕಡಿತಗೊಂಡು 42 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 305 ರನ್ ಗಳಿಸಿತ್ತು.
ಗೆಲುವಿಗೆ 306 ರನ್‌ಗಳ ಕಠಿಣ ಸವಾಲನ್ನು ಪಡೆದ ಇಂಗ್ಲೆಂಡ್ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 309 ರನ್ ಗಳಿಸಿತು.
ತಂಡದ ಆರಂಭಿಕ ದಾಂಡಿಗ ಜೇಸನ್ ರಾಯ್ 162 ರನ್(172ನಿ, 118ಎ, 13ಬೌ,3ಸಿ) ಮತ್ತು ಜೋ ರೂಟ್ 65 ರನ್(83ನಿ, 54ಎ, 9ಬೌ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು.
ಇಂಗ್ಲೆಂಡ್ ತಂಡದ ಸ್ಕೋರ್ 3.4 ಓವರ್‌ಗಳಲ್ಲಿ 18 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಪತನಗೊಂಡಿತ್ತು. ಆರಂಭಿಕ ದಾಂಡಿಗ ಎಂಎಂ ಅಲಿ ಅವರಿಗೆ ಪ್ರದೀಪ್ ಪೆವಿಲಿಯನ್ ಹಾದಿ ತೋರಿಸಿದರು.
ಎರಡನೆ ವಿಕೆಟ್‌ಗೆ ರಾಯ್ ಮತ್ತು ರೂಟ್ ಉತ್ತಮ ಇನಿಂಗ್ಸ್ ಕಟ್ಟಿದರು. ಇವರು 149 ರನ್‌ಗಳ ಕೊಡುಗೆ ನೀಡಿದರು. ತಂಡದ ಸ್ಕೋರ್ 21.3 ಓವರ್‌ಗಳಲ್ಲಿ 167ಕ್ಕೆ ತಲುಪಿದಾಗ ಇಂಗ್ಲೆಂಡ್‌ನ ಎರಡನೆ ವಿಕೆಟ್ ಪತನಗೊಂಡರೂ, ತಂಡ ಸುಭದ್ರ ಸ್ಥಿತಿಯಲ್ಲಿತ್ತು. ರೂಟ್ 65 ರನ್ ಗಳಿಸಿ ಗುಣತಿಲಕ ಎಸೆತದಲ್ಲಿ ಪ್ರದೀಪ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ಇಯಾನ್ ಮೊರ್ಗನ್ ಕ್ರೀಸ್‌ಗೆ ಆಗಮಿಸಿ ತಂಡದ ಸ್ಕೋರ್ 30 ಓವರ್‌ಗಳಲ್ಲಿ 221 ತಲುಪುವ ತನಕ ರಾಯ್‌ಗೆ ಸಾಥ್ ನೀಡಿದರು. ಮೊರ್ಗನ್ 22 ರನ್ ಗಳಿಸಿ ಲಕ್ಮಲ್‌ಗೆ ವಿಕೆಟ್ ಒಪ್ಪಿಸಿದರು.
24ನೆ ಪಂದ್ಯವನ್ನಾಡುತ್ತಿರುವ ರಾಯ್ 3ನೆ ಶತಕ ದಾಖಲಿಸಿದರು.74 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ರಾಯ್ ಶತಕ ಪೂರ್ಣಗೊಳಿಸಿದರು.
37ನೆ ಓವರ್‌ನಲ್ಲಿ ರಾಯ್ ಅವರು ಪ್ರದೀಪ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರುವಾಗ ತಂಡದ ಸ್ಕೋರ್ 37.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 281 ಆಗಿತ್ತು.
ಬೈರಿಸ್ಟೋವ್ ಮತ್ತು ಬಟ್ಲರ್ ಮುರಿಯದ ಜೊತೆಯಾಟದಲ್ಲಿ ಗೆಲುವಿಗೆ ಅಗತ್ಯದ ರನ್ ದಾಖಲಿಸಿದರು.
ಪ್ರದೀಪ್ 78ಕ್ಕೆ 2, ಲಕ್ಮಲ್ ಮತ್ತು ಗುಣತಿಲಕೆ ತಲಾ 1 ವಿಕೆಟ್ ಪಡೆದರು.
ಜೇಸನ್ ರಾಯ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶ್ರೀಲಂಕಾ 305/5: ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಶ್ರೀಲಂಕಾ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಆದರೆ ತಂಡದ ಬೌಲಿಂಗ್ ವಿಭಾಗ ದುರ್ಬಲಗೊಂಡ ಹಿನ್ನೆಲೆಯಲ್ಲಿ ಎದುರಾಳಿ ಇಂಗ್ಲೆಂಡ್ ತಂಡವನ್ನು ಒತ್ತಡಕ್ಕೆ ಸಿಲುಕಿಸಲು ಸಾಧ್ಯವಾಗಲಿಲ್ಲ.
ಲಂಕಾದ ಆರಂಭಿಕ ದಾಂಡಿಗ ಕುಶಲ್ ಪೆರೆರಾ 1 ರನ್ ಗಳಿಸಿ ರನೌಟಾದರು. ಬಳಿಕ ಗುಣತಿಲಕ, ಕುಶಲ್ ಮೆಂಡಿಸ್ , ವಿಕೆಟ್ ಕೀಪರ್ ದಿನೇಶ್ ಚಾಂಡಿಮಾಲ್‌ಮತ್ತು ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಅರ್ಧಶತಕಗಳ ಕೊಡುಗೆ ನೀಡಿ ತಂಡವನ್ನು ಆಧರಿಸಿದರು.
ಮೆಂಡಿಸ್ 77 ರನ್, ಗುಣತಿಲಕ 62 ರನ್, ಚಾಂಡಿಮಲ್ 63ರನ್ ಮತ್ತು ಮ್ಯಾಥ್ಯೂಸ್ 67 ರನ್ ಗಳಿಸಿದರು.
ಇಂಗ್ಲೆಂಡ್‌ನ ವಿಲ್ಲಿ ಮತ್ತು ಅದಿಲ್ ರಶೀದ್ ತಲಾ 2 ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್ ವಿವರ
ಶ್ರೀಲಂಕಾ 42 ಓವರ್‌ಗಳಲ್ಲಿ 305/5( ಮೆಂಡಿಸ್ 72, ಗುಣತಿಲಕ 62, ಮ್ಯಾಥ್ಯೂಸ್ ಔಟಾಗದೆ 67, ಚಾಂಡಿಮಲ್ 63; ವಿಲ್ಲಿ 58ಕ್ಕೆ 2, ರಶೀದ್ 57ಕ್ಕೆ 2).
ಇಂಗ್ಲೆಂಡ್ 40.1 ಓವರ್‌ಗಳಲ್ಲಿ 309/4( ರಾಯ್ 162, ರೂಟ್ 65, ಬೈರ್‌ಸ್ಟೋವ್ 29; ಪ್ರದೀಪ್ 78ಕ್ಕೆ 2).