ಹಜ್ ಯಾತ್ರಾರ್ಥಿಗಳಿಗೆ ಈ ಬಾರಿಯಿಂದಲೇ ಇ- ಬ್ರಾಸ್ಲೆಟ್ ಕಡ್ಡಾಯ
ಜಿದ್ದಾ, ಜು.1: ವಿಶ್ವದ ಮೂಲೆ ಮೂಲೆಗಳಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸುರಕ್ಷತಾ ಕ್ರಮವಾಗಿ ಈ ಬಾರಿಯಿಂದಲೇ ಇ- ಬ್ರಾಸ್ಲೆಟ್ ಕಡ್ಡಾಯ ಮಾಡಲಾಗಿದೆ ಎಂದು ಹಜ್ ಹಾಗೂ ಉಮ್ರಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ, ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.
ಕಳೆದ ವಾರ ಜಾರಿಗೆ ತಂದ ಈ ಎಲೆಕ್ಟ್ರಾನಿಕ್ ಬ್ರಾಸ್ಲೆಟ್ ವ್ಯವಸ್ಥೆಯಡಿ, ಪ್ರತಿ ಯಾತ್ರಾರ್ಥಿಗಳ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಎಲ್ಲಿಂದ ಈ ಯಾತ್ರಾರ್ಥಿ ಸೌದಿ ಅರೇಬಿಯಾ ಪ್ರವೇಶಿಸಿದ್ದಾರೆ ಎನ್ನುವಲ್ಲಿಂದ ಹಿಡಿದು, ವೀಸಾ ಸಂಖ್ಯೆ, ಯಾತ್ರಾರ್ಥಿ ಸಂಖ್ಯೆ ಹಾಗೂ ವಿಳಾಸದ ವರೆಗಿನ ಸಮಗ್ರ ಮಾಹಿತಿ ಲಭ್ಯವಾಗುತ್ತದೆ.
ಕಳೆದ ವಾರ ಹೊಸ ವ್ಯವಸ್ಥೆಗೆ ಚಾಲನೆ ನೀಡಿದ ಉಮ್ರಾ ವ್ಯವಹಾರಗಳ ವಿಭಾಗದ ಅಧೀನ ಕಾರ್ಯದರ್ಶಿ ಐಸಾ ಮುಹಮ್ಮದ್ ರವಾಸ್, "ಈ ಹೊಸ ಸಾಧನದಿಂದಾಗಿ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಜನದಟ್ಟಣೆಯಲ್ಲಿ ಕಳೆದು ಹೋಗಿ ಅರೆಬಿಕ್ ಭಾಷೆ ಮಾತನಾಡಲು ಬಾರದವರಿಗೆ ಇದು ಹೆಚ್ಚು ನೆರವಾಗಲಿದೆ" ಎಂದು ಹೇಳಿದ್ದರು.
ಇದು ನೀರು ನಿರೋಧಕ ಬ್ರಾಸ್ಲೆಟ್ ಆಗಿದ್ದು, ಜಿಪಿಎಸ್ ಗೆ ಇದನ್ನು ಸಂಪರ್ಕಿಸುತ್ತಾರೆ. ಇದು ವೈಯಕ್ತಿಕ ಮಾಹಿತಿಯ ಜತೆಗೆ ವೈದ್ಯಕೀಯ ಮಾಹಿತಿಯನ್ನೂ ಒಳಗೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲು ಹಾಗೂ ಗುರುತಿಸಲು ಅಧಿಕಾರಿಗಳಿಗೆ ನೆರವಾಗುತ್ತದೆ.