ಬಂಟ್ವಾಳದಲ್ಲಿ ಕುಡಿಯುವ ನೀರು ಇನ್ನು ದುಬಾರಿ: ಪುರಸಭಾ ಸಾಮಾನ್ಯ ಸಭೆಯಲ್ಲಿ ಕರ ಏರಿಸಿ ನಿರ್ಣಯ
ವಿಟ್ಲ, ಜು.1 : ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಕರವನ್ನು ಮುಂದಿನ ತಿಂಗಳಿನಿಂದ ಅನ್ವಯವಾಗುವಂತೆ ಏರಿಕೆ ಮಾಡಿ ಪುರಸಭಾ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ. ಗುರುವಾರ ಅಧ್ಯಕ್ಷ ಪಿ ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಗೃಹ ಬಳಕೆಯ ನೀರಿಗೆ 60 ರಿಂದ 80 ರೂಪಾಯಿಗೆ ಏರಿಸಲಾಗಿದ್ದರೆ, ವಾಣಿಜ್ಯ ಉದ್ದೇಶದ ನೀರಿಗೆ 150 ರಿಂದ 200 ರೂಪಾಯಿಗೆ ಏರಿಸಲಾಗಿದೆ. ಈಗಾಗಲೇ ಪುರಸಭೆಯ ಆದಾಯ ಹೆಚ್ಚಳಕ್ಕಾಗಿ ಸರಕಾರದಿಂದ ಸುತ್ತೋಲೆ ಬಂದ ಹಿನ್ನಲೆಯಲ್ಲಿ ಈ ಏರಿಕೆ ಅನಿವಾರ್ಯ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ ಪ್ರತಿಕ್ರಯಿಸಿದರು.
ಇದೇ ವೇಳೆ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ವಾಸು ಪೂಜಾರಿ ಹಾಗೂ ಪಕ್ಷೇತರ ಸದಸ್ಯ ಪ್ರವೀಣ್ .ಬಿ ಅವರು ಅಕ್ರಮ ನಳ್ಳಿ ನೀರು ಸಂಪರ್ಕ ಹಾಗೂ ಒಂದೇ ಮನೆಗೆ ಸಂಬಂಧಿಸಿ ಎರಡು ಮೂರು ಸಂಪರ್ಕಗಳನ್ನು ಪಡೆದವರ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸುವ ಮೂಲಕ ಗಮನ ಸೆಳೆದರು. ವಿರೋಧ ಪಕ್ಷದ ಸದಸ್ಯ ದೇವದಾಸ ಶೆಟ್ಟಿ ಮಾತನಾಡಿ ಮುಂದಿನ ವರ್ಷ ಹೇಗೂ 2ನೇ ಹಂತದ ಬೃಹತ್ ಕುಡಿಯುವ ನೀರಿನ ಯೋಜನೆ ಕಾರ್ಯಗತಗೊಳ್ಳಲಿದೆ. ಆ ಬಳಿಕ ನೀರಿನ ಕರ ಏರಿಕೆ ಮಾಡಿದರೆ ಸಾಲದೇ ಎಂಬ ಪ್ರಶ್ನಿಸಿದರು.
ಇದೇ ವೇಳೆ ಪುರಸಭಾ ವ್ಯಾಪ್ತಿಯ ಹದಗೆಟ್ಟ ರಸ್ತೆಗಳು ಹಾಗೂ ಚರಂಡಿಗಳು, ತ್ಯಾಜ್ಯ ವಿಲೇವಾರಿ ಅಸಮರ್ಪಕತೆ, ಮೆಸ್ಕಾಂ ಇಲಾಖಾಧಿಕಾರಿಗಳ ಗೈರು ಹಾಜರಿ, ಡೆಂಗ್ಯೂ, ಮಲೇರಿಯಾ, ಇಲಿಜ್ವರದಂತಹ ಮಾರಕ ಸಾಂಕ್ರಾಮಿಕ ರೋಗಗಳ ಹೆಚ್ಚಳ ಇವುಗಳ ಬಗ್ಗೆ ಸ್ವತಃ ಆಡಳಿತ ಪಕ್ಷದ ಸದಸ್ಯರುಗಳೇ ಪರಸ್ಪರ ವಾಗ್ವಾದ ನಡೆಸಿದರಾದರೂ ಯಾವುದೇ ತೀರ್ಮಾನಕ್ಕೆ ಬರುವಲ್ಲಿ ಸಭೆ ವಿಫಲವಾಯಿತು. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕಳೆದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಗುತ್ತಿಗೆದಾರ ಅಬ್ದುಲ್ ಸಲಾಂ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಯಿತು.