ಚಾಲಕರಹಿತ ಟೆಸ್ಲಾ ಕಾರು ಅಪಘಾತಕ್ಕೆ ವ್ಯಕ್ತಿ ಬಲಿ
ನ್ಯೂಯಾರ್ಕ್,ಜು.1 : ಖ್ಯಾತ ಕಾರು ತಯಾರಿಕಾ ಕಂಪೆನಿಯಾದ ಟೆಸ್ಲಾ ಮೋಟಾರ್ಸ್ ಸಂಸ್ಥೆಯ ಚಾಲಕರಹಿತ ಮಾಡೆಲ್ ಎಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಅಪಘಾತವೊಂದರಲ್ಲಿ ಮೃತಪಟ್ಟ ಘಟನೆಯ ತನಿಖೆಯನ್ನುಅಮೆರಿಕಾದ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಎಡ್ಮಿನಿಸ್ಟ್ರೇಶನ್ ಕೈಗೆತ್ತಿಕೊಂಡಿದೆ.ಮೇ 7 ರಂದು ಫ್ಲೋರಿಡಾದಲ್ಲಿ ನಡೆದ ಅಪಘಾತವೊಂದರಲ್ಲಿ ಈ ಚಾಲಕ ರಹಿತ ಸೆಡಾನ್ ಕಾರು ಟ್ರಾಕ್ಟರ್-ಟ್ರೈಲರ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 40 ವರ್ಷದ ಜೊಶುವಾ ಬ್ರೌನ್ ಸಾವಿಗೀಡಾಗಿದ್ದರು. ಈ ಕಾರು ಆಟೋ ಪೈಲಟ್ ಮೋಡ್ ನಲ್ಲಿ ಸಂಚರಿಸುತ್ತಿತ್ತು.ಇದೀಗ ತನಿಖೆಯ ಭಾಗವಾಗಿ ಹೈವೇ ಸೇಫ್ಟಿ ಸಂಸ್ಥೆ25,000 ಸೆಡಾನ್ ಕಾರುಗಳಲ್ಲಿ ಅಳವಡಿಸಲಾಗಿರುವ ಚಾಲನಾ ಸಹಾಯಕ ಉಪಕರಣಗಳ ವಿನ್ಯಾಸ ಹಾಗೂ ನಿರ್ವಹಣೆಯನ್ನು ಪರಿಶೀಲಿಸುತ್ತಿದೆ.
ಫ್ಲೋರಿಡಾ ಹೈವೇ ಗಸ್ತು ಸಿಬ್ಬಂದಿ ನೀಡಿದ ವರದಿ ಪ್ರಕಾರ ಕಾರಿನ ಎದುರಿನಿಂದ ಎಡ ಬದಿಗೆ ಟ್ರೈಲರ್ ತಿರುಗಿದಾಗ ಕಾರುಟ್ರೈಲರ್ ಅಡಿಯಿಂದ ಸಾಗಿ, ರಸ್ತೆಯಾಚೆ ಇದ್ದ ಬೇಲಿಯೊಂದಕ್ಕೆ ಢಿಕ್ಕಿ ಹೊಡೆದು, ಗದ್ದೆಯೊಂದನ್ನೂ ದಾಟಿಕಂಬವೊಂದಕ್ಕೆಢಿಕ್ಕಿ ಹೊಡೆದು ನಿಂತಿತ್ತು.
‘‘ಚಾಲಕರು ಆಟೋ ಪೈಲಟ್ ಮೋಡ್ ಆಕ್ಟಿವೇಟ್ ಮಾಡುವಾಗ ನಿಯಮದಂತೆ ಕಾರು ಸ್ವಯಂಚಾಲಿತವಾಗಿದ್ದರೂ ಚಾಲಕರು ತಮ್ಮ ಕೈಗಳನ್ನು ಯಾವತ್ತೂ ಸ್ಟೀರಿಂಗ್ ಮೇಲೆಯೇ ಇಡಬೇಕು ಹಾಗೂ ವಾಹನವನ್ನು ನಿಯಂತ್ರಿಸಬೇಕು,’’ ಎಂದು ಟೆಸ್ಲಾ ಮೋಟಾರ್ಸ್ ತನ್ನ ಹೇಳಿಕೆಯೊಂದರಲ್ಲಿ ತಿಳಿಸಿದೆ.