ಪಡಿತರ ಅಕ್ರಮ ದಾಸ್ತಾನು, ಮಾಹಿತಿ ನೀಡಿದವರಿಗೆ ದಾಸ್ತಾನಿನ ಶೇ. 5 ಮೊತ್ತದ ಕೊಡುಗೆ: ಸಚಿವ ಖಾದರ್
ಮಂಗಳೂರು, ಜು.1: ಅಕ್ರಮ ಪಡಿತರ ಚೀಟಿಯನ್ನು ಪತ್ತೆ ಹಚ್ಚಿ ಮಾಹಿತಿ ನೀಡುವವರಿಗೆ 400 ರೂ. ಬಹುಮಾನ ನೀಡುವಂತೆಯೇ ಅಕ್ರಮ ಆಹಾರ ಸಾಮಗ್ರಿಗಳು, ಪಡಿತರ ದಾಸ್ತಾನು ಹಾಗೂ ಸಾಗಾಟವನ್ನು ಪತ್ತೆ ಹಚ್ಚಿ ಮಾಹಿತಿ ನೀಡುವವರಿಗೆ ಪತ್ತೆಯಾದ ದಾಸ್ತಾನಿನ ಶೇ.5ರಷ್ಟು ಮೊತ್ತವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನೂತನ ಸಚಿವ ಯು.ಟಿ.ಖಾದರ್ ಪ್ರಕಟಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಮಾಹಿತಿದಾರರ ಕುರಿತಂತೆ ಇಲಾಖೆ ಗೌಪ್ಯತೆಯನ್ನು ಕಾಪಾಡಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಗ್ರಾ.ಪಂ.ಗಳ ಮೂಲಕ ಪಡಿತರ ಚೀಟಿ ವಿತರಣೆಗೆ ವ್ಯವಸ್ಥೆ
ರಾಜ್ಯದ ಪ್ರತಿಯೊಬ್ಬರು ಸುಲಭವಾಗಿ ಹಾಗೂ ಸರಳವಾಗಿ ಪಡಿತರ ಚೀಟಿಯನ್ನು ಹೊಂದುವುದು ಸಚಿವನಾಗಿ ತಮ್ಮ ಪ್ರಮುಖ ಆದ್ಯತೆಯಾಗಿದೆ. ಇದೇ ವೇಳೆ ಅಕ್ರಮ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆಹಚ್ಚಿ ರದ್ದು ಪಡಿಸಿ ಅರ್ಹ ಎಲ್ಲರಿಗೂ ಬಿಪಿಎಲ್ ಕಾರ್ಡ್ ಒದಗಿಸುವ ಕಾರ್ಯವನ್ನು ಆಧಾರ್ ಸಂಖ್ಯೆಯ ಆಧಾರದಲ್ಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಬಿಪಿಎಲ್ ಕಾರ್ಡ್ ಹಾವಳಿಯಿಂದ ನೈಜ ಬಡವರು ಹಾಗೂ ಅಲೆಮಾರಿ ಕುಟುಬಗಳಿಗೆ ಪಡಿತರ ಚೀಟಿ ಸಿಗದ ಪರಿಸ್ಥಿತಿ ಇದೆ. ಬಾಡಿಗೆ ಮನೆಯಲ್ಲಿರುವವರೂ ಪಡಿತರ ಚೀಟಿಗಾಗಿ ಪರದಾಡುವ ಸ್ಥಿತಿ ಇದೆ. ಅವೆಲ್ಲದಕ್ಕೂ ಪರಿಹಾರವಾಗಿ ಪ್ರಕ್ರಿಯೆಗಳನ್ನು ಕ್ಷಿಪಗೊಳಿಸಲು ಹಾಗೂ ಮಾನದಂಡಗಳನ್ನು ಸರಳಗೊಳಿಸಿ, ಪಡಿತರ ಚೀಟಿಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಮೂಲಕ ನೀಡಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಅನಾಮಧೇಯರ ಹೆಸರಿನಲ್ಲಿ ಪಡಿತರ ಚೀಟಿ(ಗೋಸ್ಟ್ ರೇಶನ್ ಕಾರ್ಡ್)ಗಳಿರುವ ಪ್ರಕರಣಗಳೂ ಸಾಕಷ್ಟು ಇರುವುದು ತಿಳಿದು ಬಂದಿದ್ದು, ಅವುಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಬಾಕಿ ಪಡಿತರ ಚೀಟಿಗಳು 3 ತಿಂಗಳಲ್ಲಿ ವಿಲೇ
ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಪಡಿತರ ಚೀಟಿಗಾಗಿ ಸಲ್ಲಿಕೆಯಾದ 10 ಲಕ್ಷ ಅರ್ಜಿಗಳು ವಿಲೇಗೆ ಬಾಕಿ ಇದ್ದು, ಜಿಲ್ಲೆಯಲ್ಲಿ ಈ ಸಂಖ್ಯೆ 11 ಸಾವಿರ ಅರ್ಜಿಗಳಾಗಿವೆ. ಮೂರು ತಿಂಗಳ ಅವಧಿಯಲ್ಲಿ ವಿಲೇ ಮಾಡಲಾಗುವುದು. ಎಪಿಎಲ್ ಪಡಿತರ ಚೀಟಿಗೆ ಮನೆಯಲ್ಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರವೇ ಜಾರಿಗೊಳ್ಳಲಿದೆ. ಇಲಾಖೆಯು 600 ಹುದ್ದೆಗಳನ್ನು ಹೊಂದಿದ್ದು ಪ್ರಸ್ತುತ ಅಲ್ಲಿ ಶೇ. 60ರಷ್ಟು ಹುದ್ದೆಗಳು ಖಾಲಿ ಇವೆ. ಕೆಪಿಎಸ್‌ಸಿ ಮೂಲಕ ಭರ್ತಿಗೆ ಪತ್ರ ಬರೆಯಲಾಗಿದೆ ಎಂದವರು ಹೇಳಿದರು.
ಆಶ್ರಮವಾಸಿಗಳು ಸೇರಿದಂತೆ ವಿವಿಧ ನೋಂದಾಯಿತ ವಸತಿಯುತ ಆಶ್ರಮಗಳಿಗೆ 3 ರೂ. ಅಕ್ಕಿ ಸೇರಿದಂತೆ ಪಡಿತರ ವ್ಯವಸ್ಥೆಗೆ ಇಲಾಖೆ ಕ್ರಮ ಕೈಗೊಳ್ಳಲಿದೆ. ಆಸಕ್ತ ಸರಕಾರೇತರ ಇಂತಹ ಸಂಸ್ಥೆಗಳು ಇಲಾಖೆಯಿಂದ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಸಚಿವ ಖಾದರ್ ಹೇಳಿದರು.
ಪಡಿತರ ಸಾಮಗ್ರಿ ನಿಗದಿತ ಅವಧಿಯಲ್ಲಿ ಸಿಗದಿದ್ದಲ್ಲಿ 1967ಗೆ ಕರೆ ಮಾಡಿ
ಪಡಿತರ ವಿತರಣಾ ಅಂಗಡಿಗಳಿಗೆ ಗೋದಾಮುಗಳಿಂದ ಪ್ರತಿ ತಿಂಗಳ 20ರಿಂದ 30 ತಾರೀಕಿನೊಳಗೆ ಆಹಾರ ವಸ್ತುಗಳು ಪೂರೈಕೆ ಮಾಡುವಂತೆ ಸೂಚನೆ ನೀಡಲಾಗಿದ್ದು, ಜನಸಾಮಾನ್ಯರಿಗೆ ಪಡಿತರ ಚೀಟಿಯ ಮೂಲಕ ಪ್ರತಿ ತಿಂಗಳ 1ನೆ ತಾರೀಕಿನಿಂದ 30ರವರೆಗೆ ಬೆಳಗ್ಗೆಯಿಂದ ರಾತ್ರಿ 8.30ರವರೆಗೆ ಪಡಿತರ ಸಾಮಗ್ರಿ ಲಭ್ಯವಾಗಬೇಕು. ಆಹಾರದ ಗುಣಮಟ್ಟ ಸೇರಿದಂತೆ, ನಿಗದಿತ ಅವಧಿಯಲ್ಲಿ ಪಡಿತರ ಸಾಮಗ್ರಿ ಸಿಗದಿರುವುದು, ಪಡಿತರ ಅಂಗಡಿಗಳವರು ಜನರಿಗೆ ಸ್ಪಂದಿಸದಿರುವ ದೂರುಗಳು ಇದ್ದಲ್ಲಿ 1967 ಉಚಿತ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು ಎಂದು ಸಚಿವ ಖಾದರ್ ತಿಳಿಸಿದರು.
ಪಡಿತರ ವ್ಯವಸ್ಥೆಯಲ್ಲಿ ಪ್ರೋಟೀನ್‌ಗಳ ಸೇರ್ಪಡೆಗೆ ಚಿಂತನೆ
ಪ್ರಸ್ತುತ ಪಡಿತರ ವ್ಯವಸ್ಥೆಯಡಿ ಕಾರ್ಬೊಹೈಡ್ರೇಟ್‌ಯುಕ್ತ ಆಹಾರವನ್ನು ಮಾತ್ರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರೋಟೀನ್‌ಯುಕ್ತ ಹಸಿರು ಬೇಳೆಕಾಳು ಸೇರಿದಂತೆ ಇತರ ಪೋಷಕಾಂಶಗಳುಳ್ಳ ಆಹಾರವನ್ನು ವಿತರಿಸುವ ಚಿಂತನೆ ಇದೆ ಎಂದು ಸಚಿವ ಖಾದರ್ ತಿಳಿಸಿದರು.
ವಿಕಲಚೇತನರು, ಕಿಡ್ನಿ, ಕ್ಯಾನ್ಸರ್ ರೋಗಿಗಳಿಗೂ ಬಿಪಿಎಲ್ ಕಾರ್ಡ್!
ಕುಷ್ಟರೋಗ, ವಿಕಲಚೇತನರು, ಕಿಡ್ನಿ, ಕಾನ್ಸರ್ ಮೊದಲಾದ ರೋಗಿಗಳಿಗೂ ಬಿಪಿಎಲ್ ಕಾರ್ಡ್ ಒದಗಿಸಲು ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯವನ್ನು ಇಲಾಖೆ ಮಾಡಲಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.