ಜುಲೈ 2ರಂದು ಪುತ್ತೂರು ತಾಲೂಕಿನಾದ್ಯಂತ ರಿಕ್ಷಾ ಬಂದ್
ಪುತ್ತೂರು, ಜು.1: ಶಾಲಾ ಮಕ್ಕಳನ್ನು ಸಾಗಿಸುವ ರಿಕ್ಷಾಗಳಲ್ಲಿ 6ಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸಲಾಗುತ್ತಿದೆ ಎಂದು ನಿರ್ಬಂಧ ಹೇರಿ ಪೊಲೀಸರು ದಂಡ ವಿಧಿಸುತ್ತಿರುವುದನ್ನು, ಚಾಲಕರಿಗೆ ಬ್ಯಾಡ್ಜ್ ನಂಬರ್ ನೀಡದಿರುವುದನ್ನು ಮತ್ತು ಹೊಸ ರಿಕ್ಷಾಗಳಿಗೆ ಪರವಾನಿಗೆ ನೀಡುತ್ತಿರುವುದನ್ನು ವಿರೋಧಿಸಿ ರಿಕ್ಷಾ ಚಾಲಕ ಮಾಲಕರ ಸಂಯುಕ್ತ ಹೋರಾಟ ಸಮಿತಿಯ ವತಿಯಿಂದ ಜು.2ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ರಿಕ್ಷಾ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಹೋರಾಟ ಸಮಿತಿಯ ಸಂಚಾಲಕ ದಿಲೀಪ್ ಕುಮಾರ್ ಮೊಟ್ಟೆತ್ತಡ್ಕ ತಿಳಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ರಿಕ್ಷಾಗಳಲ್ಲಿ ಶಾಲಾ ಮಕ್ಕಳನ್ನು 6ಕ್ಕಿಂದ ಹೆಚ್ಚು ಕೊಂಡೊಯ್ಯದೆ ನಿರ್ಬಂಧ ಹೇರಿ ಈಗಾಗಲೇ ಸಾವಿರಾರು ರೂಪಾಯಿ ದಂಡ ವಸೂಲು ಮಾಡಲಾಗುತ್ತಿದೆ. ಕೇವಲ ರಿಕ್ಷಾ ಚಾಲಕರ ಮೇಲೆ ಮಾತ್ರ ಕೇಸು ಹಾಕಲಾಗುತ್ತಿದ್ದು, ಉಳಿದಂತೆ ಶಾಲಾ ಬಸ್ಸು ಹಾಗೂ ಖಾಸಗಿ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆತರುತ್ತಿರುವವರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು ಪೊಲೀಸರ ವರ್ತನೆಯನ್ನು ವಿರೋಧಿಸಿ ಸೋಮವಾರದಿಂದ ಶಾಲಾ ಮಕ್ಕಳನ್ನು ಶಾಲೆಗೆ ಕರೆತರದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳ ಹೆತ್ತವರು ಈ ಬಗ್ಗೆ ಪ್ರಶ್ನಿಸುವಂತಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಜೂ.2ರಂದು ಎಲ್ಲಾ ರಿಕ್ಷಾ ಚಾಲಕ ಮಾಲಕರು ಬೆಳಗ್ಗೆ 10 ಗಂಟೆಗೆ ಬಸ್ಸು ನಿಲ್ದಾಣದ ಬಳಿಯಲ್ಲಿ ಸೇರಿ ಬಳಿಕ ಮುಖ್ಯ ರಸ್ತೆಯ ಮೂಲಕ ಸಾಗಿ ಮಿನಿವಿಧಾನ ಸೌಧಕ್ಕೆ ತೆರಳಿ ಅಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಂಜನ್, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯರಾಮ ಕುಲಾಲ್, ಸ್ನೇಹ ಸಂಗಮ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಎಸ್‌ಡಿಪಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾತೀಷ್ ಉಪಸ್ಥಿತರಿದ್ದರು.