ತರಬೇತಿ ಕೌಶಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ: ಸೀತಾರಾಮ ಶೆಟ್ಟಿ

Update: 2016-07-01 12:10 GMT

ಪುತ್ತೂರು, ಜು.1: ತರಬೇತಿಯಲ್ಲಿ ಪಡೆದುಕೊಂಡ ಕೌಶಲ್ಯವನ್ನು ನಿಮ್ಮ ಬದುಕಿನಲ್ಲಿ ಉಪಯೋಗಿಸಿಕೊಂಡಾಗ ವಿಚಾರಗಳಿಗೆ ಸಾರ್ಥಕತೆ ದೊರೆಯುತ್ತದೆ. ವೃತ್ತಿಪರವಾದ ತರಬೇತಿಗಳಿಂದ ಹೆಚ್ಚು ಅನುವ ಹಾಗೂ ನೈಪುಣ್ಯತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಉಪ್ಪಿನಂಗಡಿ ಬಳಿಯ ನೆಡ್ಚಿಲ್ ಕೃಷಿ ಯಂತ್ರಧಾರೆ ಕಚೇರಿಯಲ್ಲಿ 3 ದಿನಗಳ ಕಾಲ ನಡೆದ ಕೃಷಿ ಯಂತ್ರ ಚಾಲನೆ ಮತ್ತು ನಿರ್ವಹಣೆ ಕುರಿತ ಕೌಶಲ್ಯಾಭಿವೃದ್ಧಿ ತರಬೇತಿಯ ಸಮಾರೋಪದಲ್ಲಿ ಮಾತನಾಡಿದರು.

ಸ್ವ ಉದ್ಯೋಗಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನೀಡಿರುವ ಈ ತರಬೇತಿಯನ್ನು ಪಡೆದುಕೊಂಡಿರುವ ನೀವು ಯಂತ್ರ ಖರೀದಿ ಮಾಡಿ ಸ್ವ ಉದ್ಯೋಗದ ಮೂಲಕ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಬೇಕು. ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ ನೀಡುತ್ತದೆ. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆಯ ಮೂಲಕ ಹೆಚ್ಚು ಇಳುವರಿಯನ್ನು ಪಡೆದುಕೊಳ್ಳುವಲ್ಲಿ ರೈತರು ಶ್ರಮಿಸುತ್ತಿರುವ ಈ ದಿನಗಳಲ್ಲಿ ನಿಮ್ಮ ಸ್ವ-ಉದ್ಯೋಗಕ್ಕೆ ಅವಕಾಶಗಳು ಹೆಚ್ಚಾಗಿವೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಯೀಮ್ ಹುಸೈನ್ ಮಾತನಾಡಿ, ಜಿಲ್ಲೆಯ ಸಾಂಪ್ರದಾಯಿಕ ಬೆಳೆಯಾದ ಭತ್ತದಿಂದ ವಿಮುಖರಾಗಿದ್ದ ರೈತರು ಇದೀಗ ಮತ್ತೆ ಭತ್ತದ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಸರಕಾರದ ಕೃಷಿ ಯಂತ್ರಧಾರೆ ಯೋಜನೆ ಹಾಗೂ ಧರ್ಮಸ್ಥಳ ಯೋಜನೆಯ ನಿರ್ವಹಣೆ ಕಾರಣವಾಗುತ್ತಿದೆ. ಕೃಷಿಕರು ಹೆಚ್ಚು ಹೆಚ್ಚು ಯಂತ್ರಗಳ ಬಳಕೆ ಮಾಡುವ ಮೂಲಕ ತಮ್ಮ ಕೃಷಿ ಬದುಕನ್ನು ಉನ್ನತೀಕರಣ ಮಾಡಬೇಕಾಗಿದೆ. ಜನತೆಗೆ ಯಂತ್ರಗಳ ಬಳಕೆ ಹಾಗೂ ನಿರ್ವಹಣೆ ಬಗ್ಗೆ ತರಬೇತಿ ನೀಡುವ ಕೆಲಸ ಒಂದು ಉತ್ತಮ ಪ್ರಯತ್ನ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಪಧ್ಮನಾಭ ಶೆಟ್ಟಿ, ಸಾಯ ಎಂಟರ್ ಪ್ರೈಸಸ್‌ನ ಪ್ರಬಂಧಕ ಅಭಿಜಿತ್, ನೆಡ್ಚಿಲ್ ಕೃಷಿ ಯಂತ್ರಧಾರೆ ಕೇಂದ್ರದ ವ್ಯವಸ್ಥಾಪಕ ಯತೀಶ್ ಉಪಸ್ಥಿತರಿದ್ದರು. ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಹರೀಶ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ವಸಂತಿ ವಂದಿಸಿದರು. ವಲಯ ಮೇಲ್ವಿಚಾರಕ ಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ಸಾಯ ಎಂಟರ್ ಪ್ರೈಸಸ್, ಗ್ರೀವ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ಕೃಷಿ ಯಂತ್ರಧಾರೆ ನೆಡ್ಚಿಲ್ ಇವುಗಳ ಜಂಟಿ ಆಶ್ರಯದಲ್ಲಿ ರೈತರಿಗಾಗಿ 3 ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News