ಮನಪಾದಿಂದ ದಿಢೀರ್ ದಾಳಿ: 2 ಅಂಗಡಿಗಳಿಗೆ ಬೀಗ!

Update: 2016-07-01 16:21 GMT

ಮಂಗಳೂರು,ಜು.1: ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಉದ್ದಿಮೆ ಪರವಾನಿಗೆ ಮಾಡದಿರುವ, ನವೀಕರಣಗೊಳಿಸದಿರುವ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ನೇತೃತ್ವದ ತಂಡ ನಗರದ ಕೆಲವು ಮಳಿಗೆಗಳಿಗೆ ದಿಢೀರ್ ದಾಳಿ ನಡೆಸಿ, ಪರವಾನಿಗೆ ಹೊಂದಿರದ ಎರಡು ಅಂಗಡಿಗಳಿಗೆ ಬೀಗ ಜಡಿದು, ಪರವಾನಿಗೆ ನವೀಕರಿಸದ 4 ಅಂಗಡಿಗಳಿಗೆ ನೋಟಿಸು ನೀಡುವ ಮೂಲಕ ಎಚ್ಚರಿಕೆ ನೀಡಿದೆ.ಇದೇ ವೇಳೆ ನಿಷೇಧಿತ ಪಾಸ್ಟಿಕ್‌ಗಳನ್ನು ವಶಪಡಿಸುವ ಕಾರ್ಯಾಚರಣೆಯೂ ನಡೆಯಿತು.

ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ನೇತೃತ್ವದ ತಂಡ ಇಂದು ಸಂಜೆ ಆರೋಗ್ಯ ನಿರೀಕ್ಷಕರು, ಇಂಜನಿಯರ್‌ಗಳು ಹಾಗೂ ಕೆಲ ಕಾರ್ಪೊರೇಟರ್‌ಗಳ ಜತೆ ಕಾರ್ಯಾಚರಣೆ ನಡೆಸಿದ ತಂಡ ನಗರದ ಸಿಟಿ ಸೆಂಟರ್ ಮಾಲ್‌ಗೆ ಭೇಟಿ ನೀಡಿ ಅಲ್ಲಿ ಪರವಾನಿಗೆ ಇಲ್ಲದೆ ವ್ಯವಹಾರ ನಡೆಸುತ್ತಿದ್ದ ಪ್ರತಿಷ್ಠಿತ ಮಳಿಗೆ ಹಾಗೂ ಮಾಲ್ ಸಮೀಪದ ಅಂಗಡಿಯೊಂದಕ್ಕೆ ಬೀಗ ಜಡಿಯಿತು. ಈ ಮಾಲ್‌ನಲ್ಲಿ ತಂಡ ಪರಿಶೀಲನೆ ನಡೆಸುತ್ತಿದ್ದ ವೇಳೆ ಉದ್ದಿಮೆ ಪರವಾನಿಗೆ ಹೊಂದಿರದ ಕೆಲವೊಂದು ಮಳಿಗೆಗಳವರು ಸ್ವಯಂ ಪ್ರೇರಿತವಾಗಿ ಬಾಗಿಲು ಮುಚ್ಚಿದ ಪ್ರಸಂಗವೂ ನಡೆಯಿತು. ಮಾಲ್‌ನ ಮಹಡಿಗಳ ಪ್ಯಾಸೇಜ್‌ಗಳಲ್ಲಿ ಡೋರ್ ನಂಬ್ರ, ಪರವಾನಿಗೆ ಇಲ್ಲದೆಯೇ ಕಾರ್ಯಾಚರಿಸುತ್ತಿರುವ ತೆರೆದ ಮಳಿಗೆಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಕವಿತಾ ಸನಿಲ್ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಮಾಲ್‌ನ ಮಳಿಗೆಗಳು ಹಾಗೂ ಸಮೀಪದ ಅಂಗಡಿಗಳಲ್ಲಿ ಬಳಸಲಾಗುತ್ತಿದ್ದ ನಿಷೇಧಿತ ಪ್ಲಾಸ್ಟಿಕನ್ನು ಅಧಿಕಾರಿಗಳು ವಶಪಡಿಸಿಕೊಂಡರು.

ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಕವಿತಾ ಸನಿಲ್, ‘‘ಉದ್ದಿಮೆ ಪರವಾನಿಗೆ ನವೀಕರಣ, ಹಾಗೂ ಪರವಾನಿಗೆ ಹೊಂದದವರು ಜೂ. 30ರೊಳಗೆ ನವೀಕರಣ ಮಾಡುವಂತೆ ಹಾಗೂ ಜುಲೈ 1ರಿಂದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಈಗಾಗಲೇ ಪತ್ರಿಕಾ ಪ್ರಕಟನೆ ಹಾಗೂ ನೋಟೀಸು ನೀಡುವ ಮೂಲಕ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ಪ್ರತಿಷ್ಠಿತ ಮಳಿಗೆಗಳ ಮೂಲಕವೇ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಲಾಗಿದೆ’’ ಎಂದರು.

‘‘ಮಾಹಿತಿಯ ಬಳಿಕವೂ ಕೆಲವರು ಇನ್ನೂ ಉದ್ದಿಮೆ ಪರವಾನಿಗೆ ನವೀಕರಣ ಹಾಗೂ ಕೆಲವರು ಪರವಾನಿಗೆಯನ್ನೇ ಪಡೆಯದೆ ಉದ್ದಿಮೆ ನಡೆಸುತ್ತಿರುವುದು ಇಂದು ನಡೆದ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. ಸಾರ್ವಜನಿಕರು ಎಚ್ಚೆತ್ತುಕೊಂಡು ತಾವು ಮಾಡುತ್ತಿರುವ ಉದ್ದಿಮೆಗೆ ಪರವಾನಿಗೆ ಪಡೆಯಬೇಕು. ದಾಖಲೆಗಳು ಸರಿಯಾಗಿದ್ದಲ್ಲಿ ಒಂದು ಅಥವಾ ಎರಡು ದಿನಗಳಲ್ಲೇ ಪರವಾನಿಗೆ ನೀಡುವ ಭರವಸೆಯನ್ನು ನಾನು ಒದಗಿಸುತ್ತೇನೆ’’ ಎಂದ ಕವಿತಾ ಸನಿಲ್ ಈ ಸಂದರ್ಭ ನುಡಿದರು.

ತಂಡದಲ್ಲಿ ಮನಪಾ ಆರೋಗ್ಯಅಧಿಕಾರಿ ಮಂಜಯ್ಯ ಶೆಟ್ಟಿ, ಅಭಿಯಂತರರಾದ ಮಧು, ಆರೋಗ್ಯ ನಿರೀಕ್ಷಕರಾದ ನಿರ್ಮಲಾ, ಕರುಣಾಕರ, ಯಶವಂತ ಹಾಗೂ ಪೂವಪ್ಪ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

20 ದಿನಗಳಲ್ಲಿ 14 ಲಕ್ಷ ರೂ. ಕಂದಾಯ ಸಂಗ್ರಹ

‘‘ಮನಪಾದಿಂದ ಈಗಾಗಲೇ ಸೂಚನೆ ನೀಡಿದ ಬಳಿಕ 326 ಮಂದಿ ಹೊಸ ಪರವಾನಿಗೆ ಪಡೆದುಕೊಂಡಿದ್ದರೆ, 416 ಉದ್ದಿಮೆದಾರರು ತಮ್ಮ ಪರವಾನಿಗೆಯನ್ನು ನವೀಕರಣ ಮಾಡಿಕೊಂಡಿದಾದರೆ. ಇದರಿಂದ ಕಳೆದ 20 ದಿನಗಳಲ್ಲಿ 16 ಲಕ್ಷ ರೂ. ಕಂದಾಯ ಸಂಗ್ರಹವಾಗಿದೆ. ಇದು ನಗರದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಗತ್ಯವಾಗಿದ್ದು, ಎಲ್ಲಾ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಬೇಕು’’ ಎಂದು ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಮನವಿ ಮಾಡಿದರು.

ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದ್ದು, ನಗರದಲ್ಲಿ 8,026 ಉದ್ದಿಮೆದಾರರು ಪರವಾನಿಗೆ ನವೀಕರಿಸಲು ಬಾಕಿ ಇದೆ. ಈಗಾಗಲೇ ಬಂದ್ ಮಾಡಲಾಗಿರುವ ಮಳಿಗೆಗಳವರು ಪರವಾನಿಗೆ ಪಡೆಯದೆ ಮಳಿಗೆ ತೆರೆದು ವ್ಯಾಪಾರ ನಡೆಸಿದರೆ ಕಾನೂನು ರೀತಿಯ ಕ್ರಮ ಜರಗಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಕವಿತಾ ಸನಿಲ್ ಉತ್ತರಿಸಿದರು. 

ಅಧಿಕಾರಿಗಳಿಗೆ ಮಾಹಿತಿ ನೀಡದೆ ದಿಢೀರ್ ಕಾರ್ಯಾಚರಣೆ

 ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್‌ರವರು ಕಾರ್ಪೊರೇಟರ್‌ಗಳಾದ ರಜನೀಶ್ ಹಾಗೂ ನಾಗವೇಣಿ ಜತೆಯಲ್ಲಿ ಅಧಿಕಾರಿಗಳಿಗೆ ಪೂರ್ವ ಮಾಹಿತಿ ನೀಡದೆಯೇ ದಿಢೀರ್ ದಾಳಿ ನಡೆಸುವ ಮೂಲಕ ಗಮನ ಸೆಳೆದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ಯಾವೆಲ್ಲಾ ಅಂಗಡಿಗಳಿಗೆ ಪರವಾನಿಗೆ ನವೀಕರಣವಾಗಿಲ್ಲ ಎಂಬ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾರ್ಯಾಚರಣೆಗೆ ಮುಂದಾದರೆ ತಕ್ಷಣ ಮಾಹಿತಿ ಮಳಿಗೆಗಳವರಿಗೆ ಮುಟ್ಟುತ್ತದೆ. ಇಂತಹ ವ್ಯವಸ್ಥೆ ನಮ್ಮಲ್ಲಿದೆ. ಹಾಗಾಗಿ ನೇರವಾಗಿ ಇಂದು ಮೇಯರ್ ಹಾಗೂ ಮುಖ್ಯ ಸಚೇತಕರ ಅನುಮತಿಯೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. ಇದರಿಂದ ಜಾಗೃತಿ ಮೂಡಿಸಿ ಪರವಾನಿಗೆ ಮಾಡಿಸುವುದು, ನವೀಕರಣಗೊಳಿಸಲು ಪ್ರೇರೇಪಿಸುವುದು ನಮ್ಮ ಪ್ರಮುಖ ಉದ್ದೇಶ. ಹಾಗಾಗಿ ಯಾವುದೇ ಸಣ್ಣ ಅಂಗಡಿಗಳಲ್ಲಿ ಈ ಕಾರ್ಯಾಚರಣೆ ನಡೆಸದೆ ಪ್ರತಿಷ್ಠಿತ ಮಳಿಗೆಗಳ ಮೂಲಕವೇ ಆರಂಭಿಸಲಾಗಿದೆ. ನಗರದಲ್ಲಿ 29,100ರಷ್ಟು ಉದ್ದಿಮೆಗಳು ಕಾರ್ಯಾಚರಿಸುತ್ತಿವೆ. ಪ್ರತಿ ವರ್ಷ ಫೆಬ್ರವರಿ ತಿಂಗಳೊಳಗೆ ಉದ್ದಿಮೆ ಪರವಾನಿಗೆ ನವೀಕರಣ ಮಾಡುವುದು ಕಡ್ಡಾಯ ಹಾಗಿದ್ದರೂ ಜುಲೈ ತಿಂಗಳು ಆರಂಭವಾದರೂ ನವೀಕರಣ ಮಾಡದಾಗ ಜಿಲ್ಲೆಯ ಅಭಿವೃದ್ಧಿಗಾಗಿ ಕಂದಾಯ ಸಂಗ್ರಹದ ದೃಷ್ಟಿಯಿಂದ ಕಾರ್ಯಾಚರಣೆ ನಡೆಸುವುದು ಅನಿವಾರ್ಯ’’ ಎಂದು ಕವಿತಾ ಸನಿಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News