ಭತ್ತವನ್ನು ಕಾಳುಮೆಣಸು ಎಂದು ಬ್ಯಾಂಕ್‌ನ್ನು ಯಾಮಾರಿಸಿ ಸಾಲಪಡೆದ ಗ್ರಾಹಕ!

Update: 2016-07-01 15:33 GMT

ಸುಳ್ಯ, ಜು.1: ಕಾಳುಮೆಣಸು ಎಂದು ಭತ್ತವನ್ನು ಸಹಕಾರಿ ಸಂಘದಲ್ಲಿ ಅಡವಿರಿಸಿ ಲಕ್ಷಾಂತರ ರೂ. ಸಾಲ ಪಡೆದು ವಂಚಿಸಿದ ಘಟನೆ ಸುಳ್ಯ ತಾಲೂಕಿನ ಸೊಸೈಟಿಯೊಂದರಲ್ಲಿ ನಡೆದಿದ್ದು, ಗ್ರಾಹಕ ತಪ್ಪನ್ನು ಒಪ್ಪಿಕೊಂಡು ಸಾಲ ಹಿಂತಿರುಗಿಸಿ ಭತ್ತವನ್ನು ಕೊಂಡೊಯ್ದ ಘಟನೆ ನಡೆದಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ನೂಜಾಲು ಸುಬ್ರಹ್ಮಣ್ಯ ಭಟ್ ಎಂಬವರು ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಾಲ್ಕು ಚೀಲ ಕಾಳುಮೆಣಸು ಅಡಿವಿರಿಸಿ ಅಡಮಾನ ಸಾಲ ಪಡೆದಿದ್ದರು. ಬಳಿಕ ತನ್ನ ಪತ್ನಿ, ಸಂಬಂಧಿಕರು ಹಾಗೂ ಕೆಲಸದವರ ಹೆಸರಿನಲ್ಲಿ ಸುಮಾರು 30 ಚೀಲ ಕಾಳುಮೆಣಸು ಅಡವಿರಿಸಿ ಲಕ್ಷಾಂತರ ರೂ. ಸಾಲ ಪಡೆದಿದ್ದರು. ಬಳಿಕ ಮೊದಲಿರಿಸಿದ್ದ ನಾಲ್ಕು ಚೀಲ ಕಾಳುಮೆಣಸನ್ನು ಬಿಡಿಸಿ ಸಾಲ ಚುಕ್ತಾ ಮಾಡಿದ್ದರು. ಉಳಿದಂತೆ 30 ಚೀಲ ಕಾಳುಮೆಣಸುವಿನ ಸಾಲ ಬಾಕಿ ಇತ್ತು. ಆದರೆ, 30 ಚೀಲ ಕಾಳುಮೆಣಸು ಎಂದು ನಂಬಿಸಿ ಭತ್ತವನ್ನು ತುಂಬಿಸಿ ವಂಚಿಸಿದ ಪ್ರಕರಣ ಬುಧವಾರ ಬೆಳಕಿಗೆ ಬಂದಿದ್ದು, ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡು ಸಾಲ ಮರುಪಾವತಿಸಿ ಭತ್ತವನ್ನು ಕೊಂಡೊಯ್ದಿದ್ದಾರೆ.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್‌ರಿಗೆ ವಿಷಯ ತಿಳಿಯುತ್ತಿದ್ದಂತೆ ಅವರು ಸಾಲ ಪಡೆದ ನೂಜಾಲ ಸುಬ್ರಹ್ಮಣ್ಯ ಭಟ್‌ರಿಗೆ ಕರೆ ಮಾಡಿ ವಂಚನೆ ವಿಷಯ ತಿಳಿಸಿದ್ದು, ತಪ್ಪೊಪ್ಪಿಕೊಂಡ ಭಟ್ ಅವರು ಸಾಲ ಮರುಪಾವತಿಸಿ ಭತ್ತವನ್ನು ಕೊಂಡೊಯ್ದರೆನ್ನಲಾಗಿದೆ. ಆರೋಪಿ ಸಹಕಾರಿ ಸಂಘದಿಂದ ವರ್ಷದ ಹಿಂದೆ ಚಿನ್ನವನ್ನೂ ಅಡವಿರಿಸಿ ಲಕ್ಷಾಂತರ ರೂ. ಸಾಲವನ್ನು ಪಡೆದಿದ್ದು, ಅನುಮಾನ ಬಂದು ಪರೀಕ್ಷಿಸಿದಾಗ ಅದೂ ನಕಲಿ ಚಿನ್ನ ಎಂಬ ವಿಷಯ ಗೊತ್ತಾಗಿದೆ.

ಈ ಎರಡೂ ಪ್ರಕರಣಗಳ ಬಗ್ಗೆ ಚರ್ಚಿಸಲು ಸಂಘದ ಆಡಳಿತ ಮಂಡಳಿಯ ತುರ್ತು ಸಭೆ ಗುರುವಾರ ನಡೆದಿದೆ. ವಿಚಾರಣೆ ನಡೆಸಿ ಎಲ್ಲಾ ಸಾಲವನ್ನು ವಸೂಲಿ ಮಾಡಲಾಗಿದೆ. ಹಾಗಾಗಿ ಪೊಲೀಸ್ ದೂರು ನೀಡಿಲ್ಲ ಎನ್ನುವುದು ಸಂಘದ ಅಧ್ಯಕ್ಷ ವಿಷ್ಣು ಭಟ್ ಅವರ ಹೇಳಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News