ಸೌಹಾರ್ದಯುತವಾಗಿ ಬದುಕಲು ಇಫ್ತಾರ್ ಕೂಟಗಳು ಸಹಕಾರಿ: ಡಾ.ಎಂ.ಮೋಹನ್ ಆಳ್ವ
ಮಂಗಳೂರು, ಜು.1:ಸಮಾಜಲ್ಲಿ ಎಲ್ಲಾ ಜನರೊಂದಿಗೆ ಶಾಂತಿ ಸೌಹಾರ್ದದಿಂದ ಬದುಕಲು ಸಾಮೂಹಿಕ ಇಫ್ತಾರ್ ಕೂಟಳ ಸಂದೇಶ ಸಹಕಾರಿಯಾಗಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.
ನಗರದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ನಗರದ ವಿಶ್ವಾಸ್ ಕ್ರೌನ್‌ನ ಟ್ಯಾಲೆಂಟ್ ಸಭಾಭವನದಲ್ಲಿ ಹಮ್ಮಿಕೊಂಡ ಪತ್ರಕರ್ತರೊಂದಿಗೆ ಇಫ್ತಾರ್ ಕೂಟದ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ರಮಝಾನ್ ದೇಹ ಶುದ್ಧಿ ಹಾಗೂ ಆತ್ಮಶುದ್ಧಿಯ ಆಚರಣೆಯಾಗಿದೆ. ಈ ತಿಂಗಳಲ್ಲಿ 30 ದಿನಗಳ ಉಪವಾಸವನ್ನು ಆಚರಿಸುವ ಮೂಲಕ ಹೊಸ ಸಂಸ್ಕಾರವನ್ನು ಪಡೆಯುತ್ತಾರೆ. ಜೊತೆಗೆ ಸಾಮೂಹಿಕ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸಮಾಜದಲ್ಲಿ ಪರಸ್ಪರ ಅಪನಂಬಿಕೆಗಳನ್ನು ದೂರ ಮಾಡಲು ಸಾಧ್ಯ. ವಿವಿಧ ಧರ್ಮ, ಅವುಗಳ ಆಚರಣೆಗಳನ್ನು, ನಂಬಿಕೆಗಳನ್ನು ಗೌರವಿಸಿ ಬದುಕುವ ಮೂಲಕ ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣ ಸಾಧ್ಯ ಎಂದು ಮೋಹನ್ ಆಳ್ವ ತಿಳಿಸಿದರು.
ಇಫ್ತಾರ್ ವ್ಯಕ್ತಿಯನ್ನು ಸಂಸ್ಕಾರಯುತಗೊಳಿಸುವ ಒಂದು ಮಾರ್ಗ. ಜೊತೆಗೆ ರಮಝಾನ್ ಸಹಾನುಭೂತಿಯ ತಿಂಗಳು. ಈ ಸಂದರ್ಭದಲ್ಲಿ ಸಮಾಜದ ದೀನರ, ದುರ್ಬಲರ ನೋವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಆಚರಣೆಗಳಿವೆ. ಶ್ರೀಮಂತರ ಸಂಪತ್ತಿನಲ್ಲಿಯೂ ಬಡವರ ಪಾಲಿದೆ. ಝಕಾತ್ ಬಡವರ ಹಕ್ಕು. ಇಲ್ಲಿ ದಾನ ಕೊಡುವವನು ಶ್ರೇಷ್ಠ, ತೆಗೆದು ಕೊಳ್ಳುವವನು ಕನಿಷ್ಠ ಎಂಬ ಭಾವನೆ ಇಲ್ಲ. ಮನುಷ್ಯನ ಹಸಿವು, ನೋವು, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಮತ್ತು ಎಲ್ಲರ ಬಗ್ಗೆ ಸಹಾನುಭೂತಿ ಹೊಂದಲು ಸಾಧ್ಯವಾಗಿರುವುದರಿಂದ ಈ ತಿಂಗಳ ಉಪವಾಸ ಆಚರಣೆಗೆ ಮಹತ್ವವಿದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ತಿಳಿಸಿದರು.
ರಮಝಾನ್ ಅಂತರಾತ್ಮದ ಶುದ್ಧಿಯೊಂದಿಗೆ ತ್ಯಾಗ,ಸೇವೆಯ ಮೂಲಕ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಗೆ ಪೂರಕವಾದ ತಿಂಗಳಾಗಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ತಿಳಿಸಿದರು.
ರಮಝಾನ್ ತಿಂಗಳು ನೈತಿಕ ಶಕ್ತಿಯನ್ನು ಸಂಪಾದಿಸುವ ತಿಂಗಳು. ಎಲ್ಲರೊಂದಿಗೆ ಹಂಚಿ ತಿನ್ನುವ ಭಾವನೆಯನ್ನು ಮೂಡಿಸುವ, ಸಮಾಜವನ್ನು ಒಂದುಗೂಡಿಸುವ ಆಚರಣೆಗಳು ಇಫ್ತಾರ್ ಕೂಟದಂತಹ ಕಾರ್ಯಕ್ರಮಗಳಲ್ಲಿದೆ ಎಂದು ಪತ್ರಕರ್ತ ಮನೋಹರ ಪ್ರಸಾದ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನಿನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡೀಸ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ವಿ-ಫೋರ್ ನ್ಯೂಸ್ ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನಿನ ಉಪಾಧ್ಯಕ್ಷ ಸೈದುದ್ದೀನ್ ಬಜ್ಪೆ ಸ್ವಾಗತಿಸಿದರು.ಮುಹಮ್ಮದ್ ಯು.ಬಿ. ಕಾರ್ಯಕ್ರಮ ನಿರೂಪಿಸಿದರು. ಟಿಆರ್‌ಎಫ್‌ನ ಸಲಹೆಗಾರ ರಫೀಕ್ ಮಾಸ್ಟರ್ ಟಿಆರ್‌ಎಫ್‌ನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ವಿವರಿಸಿದರು.