ಉದ್ಯೋಗ ಆಧಾರಿತ ಶಿಕ್ಷಣ ದೇಶದಲ್ಲಿ ರೂಪುಗೊಳ್ಳಬೇಕು : ಡಾ.ಬಿ.ಆರ್.ಶೆಟ್ಟಿ
ಮೂಡುಬಿದಿರೆ, ಜು.2: ಕೇವಲ ಪಠ್ಯದ ವಿಷಯದಲ್ಲಿ ಸಾಧನೆ ಮಾಡುವುದು ಮಾತ್ರವಲ್ಲ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸಹಿತ ಪಠ್ಯೇತರ ಚಟುವಟಿಕೆಗಳಿಂದ ಸಕ್ರಿಯರಾಗುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಬಹುದು. ಗುಣಮಟ್ಟದ ಸೇವೆಯೇ ಯಶಸ್ಸಿಗೆ ಮೂಲ. ವೌಲ್ಯಯುತ ಶಿಕ್ಷಣದೊಂದಿಗೆ ಉದ್ಯೋಗ ಆಧಾರಿತ ಶಿಕ್ಷಣ ವ್ಯವಸ್ಥೆ ದೇಶದಲ್ಲಿ ರೂಪುಗೊಳ್ಳಬೇಕು ಎಂದು ಅನಿವಾಸಿ ಭಾರತೀಯ ಉದ್ಯಮಿ ಪದ್ಮಶ್ರೀ ಡಾ.ಬಿ.ಆರ್ ಶೆಟ್ಟಿ ಹೇಳಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ‘ಆಳ್ವಾಸ್ ಪ್ರಗತಿ 2016’ 7ನೆ ವರ್ಷದ ಬೃಹತ್ ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ, ಛಲ, ಗುಣಮಟ್ಟದ ಸೇವೆಗೆ ಬಂಡವಾಳ. ಉತ್ತಮ ವ್ಯಕ್ತಿತ್ವ ನಮ್ಮನ್ನು ಅರ್ಹ ಅಭ್ಯರ್ಥಿಯನ್ನಾಗಿ ರೂಪಿಸುತ್ತದೆ. ಹಣ ಸಂಪಾದನೆ ಮಾಡುವುದು ನಮ್ಮ ಧ್ಯೇಯವಾಗಿರಬಾರದು. ನಮ್ಮಲ್ಲಿರುವ ಸಂಪತ್ತನ್ನು ಸಾಮಾಜಿಕ ಸೇವೆಗೆ ವಿನಿಯೋಗಿಸುವ ಮನೋಭಾವನೆ ಪ್ರತಿಯೊಬ್ಬರಲ್ಲಿ ಜಾಗೃತಗೊಳ್ಳಬೇಕು. ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸರಕಾರದ ಮಟ್ಟದಲ್ಲಿ ಮಾಡಲಾಗದ ಕೆಲಸವನ್ನು ಮಾಡಿದೆ ಎಂದು ಹೇಳಿದರು.
ಮಾಜಿ ಸಚಿವ, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಯುವಜನರಿಗೆ ಗುಣಮಟ್ಟದೊಂದಿಗೆ ಉದ್ಯೋಗವನ್ನು ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯ. ದುಡಿಯುವ ಹುಮ್ಮಸ್ಸಿನಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ ಎನ್ನುವುದಕ್ಕೆ ಡಾ.ಬಿ.ಆರ್ ಶೆಟ್ಟಿ ಹಾಗೂ ಡಾ.ಮೋಹನ ಆಳ್ವ ಅವರೇ ಸಾಕ್ಷಿ. ಯುವಜನರಿಗೆ ಇವರೇ ಸ್ಪೂರ್ತಿ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಸಣ್ಣಮಟ್ಟದಲ್ಲಿ ಆರು ವರ್ಷಗಳ ಹಿಂದೆ ಪ್ರಾರಂಭವಾದ ಉದ್ಯೋಗಮೇಳ ಇಂದು ಬೃಹತ್ ಉದ್ಯೋಗಮೇಳವಾಗಿ ಮೂಡಿಬಂದಿದೆ. ಇಲ್ಲಿನ ಯಶಸ್ಸಿನಿಂದ ಪ್ರೇರಿತರಾದ ವೀರಪ್ಪ ಮೊಲಿ ಅವರು ಚಿಕ್ಕಬಳ್ಳಾಪುರದಲ್ಲಿ ಹಾಗೂ ಸಚಿವ ಬಿ.ರಮಾನಾಥ ರೈ ಅವರು ಬಂಟ್ವಾಳದಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಿರುವುದು ಹೆಮ್ಮೆಯ ವಿಷಯವಾಗಿದೆ. ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು ಮಾತ್ರವಲ್ಲ, ರಾಜ್ಯದ ವಿವಿಧ ಸಂಸ್ಥೆಗಳಿಂದ ಬಂದಂತಹ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಎಸೆಸೆಲ್ಸಿಯಿಂದ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯುವ ಅವಕಾಶವಿದ್ದು, ನಮ್ಮ ಪ್ರಯತ್ನವನ್ನು ಸಾರ್ಥಕಗೊಳಿಸಿದೆ ಎಂದರು.
ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಆಳ್ವಾಸ್ ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥೆ ಜಯಶ್ರೀ ಸುಧಾಕರ್ ಉಪಸ್ಥಿತರಿದ್ದರು. ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಗಳು: ಮಾನಸ ಡಿಜಿಟಲ್ಸ್, ಮೂಡುಬಿದಿರೆ.