ಸಮಾನ ನಾಗರಿಕ ಸಂಹಿತೆ ಓಟ್‌ಬ್ಯಾಂಕ್ ರಾಜಕಾರಣ: ಜನಾರ್ದನ ಪೂಜಾರಿ

Update: 2016-07-02 12:44 GMT

ಮಂಗಳೂರು,ಜು.2: ಏಕರೂಪ ನಾಗರಿಕ ಸಂಹಿತೆ ಜಾರಿಯ ಪರಿಣಾಮಗಳ ಕುರಿತು ವಿಸ್ತೃತ ವರದಿ ನೀಡುವಂತೆ ಕೇಂದ್ರ ಸರಕಾರ ಕಾನೂನು ಆಯೋಗಕ್ಕೆ ನೀಡಿರುವ ಸೂಚನೆಯನ್ನು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಟೀಕಿಸಿದ್ದು, ಇದು ಓಟ್‌ಬ್ಯಾಂಕ್ ರಾಜಕಾರಣ ಎಂದು ಹೇಳಿದ್ದಾರೆ.

ಅವರು ಇಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂತಹ ಓಟ್ ಬ್ಯಾಂಕ್ ರಾಜಕಾರಣದ ಪ್ರಸ್ತಾವನೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದರು.

ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರಕಾರ ಈ ಪ್ರಸ್ತಾವನೆಗೆ ಮುಂದಾಗಿದೆ. ದೇಶದಲ್ಲಿ ಹಲವಾರು ಧರ್ಮ, ಜಾತಿ ಮತಗಳಿವೆ. ಎಲ್ಲ ಧರ್ಮ, ಜಾತಿಗಳಲ್ಲಿಯೂ ಭಿನ್ನ ಭಿನ್ನವಾದ ಸಂಸ್ಕೃತಿ ಇದೆ. ವಿವಾಹದ ಪ್ರಕ್ರಿಯೆ, ಉತ್ತರಾಧಿಕಾರತ್ವ, ಆಸ್ತಿ ಹಕ್ಕುಗಳು ಬೇರೆ ಬೇರೆಯಾಗಿವೆ. ಅವನ್ನೆಲ್ಲ ಬದಲಾಯಿಸಲು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಹೊರಟಿದೆ. ಆದರೆ ಕಾಂಗ್ರೆಸ್ ಈ ಸಮಾನ ನಾಗರಿಕ ಸಂಹಿತೆಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ಹೇಳಿದರು.

ಹಿಂದೂ ಸಂಪ್ರದಾಯದಲ್ಲಿ ವಧೂ ವರರು ಸಪ್ತಪದಿ ತುಳಿಯುತ್ತಾರೆ. ಆದರೆ ಮುಸ್ಲಿಮರಲ್ಲಿ ವಧುವನ್ನು ಮಂಟಪಕ್ಕೆ ಕರೆತರುವ ಪದ್ಧತಿಯೇ ಇಲ್ಲ. ಎಲ್ಲ ಧರ್ಮಗಳಲ್ಲಿಯೂ ಇರುವ ಬೇರೆ ಬೇರೆ ಆಚರಣೆಗಳಿಗೆ ಅವಕಾಶ ನೀಡಬೇಕು. ದೇಶದ ಏಕತೆಯನ್ನು ಒಡೆಯುವ ಕೆಲಸವನ್ನು ಮಾಡುವುದು ಸರಿಯಲ್ಲ. ಕರಾವಳಿಯವ ಕಾನೂನು ಸಚಿವರು ಈ ಪ್ರಸ್ತಾವನೆ ಜಾರಿ ತರಲು ಸಮಯಾವಕಾಶ ಬೇಕು ಎಂದು ಹೇಳಿದ್ದಾರೆ. ಆದರೆ 50 ವರ್ಷಗಳಿಂದಲೂ ಕಾಂಗ್ರೆಸ್ ಇದನ್ನು ವಿರೋಧಿಸುತ್ತಲೇ ಬಂದಿದೆ. ಈಗ ಈ ಹೊಸ ಪ್ರಸ್ತಾವನೆ ಅನಗತ್ಯ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಬೇಡಿಕೆ ಅಪ್ರಸ್ತುತ:

ಮುಖ್ಯಮಂತ್ರಿ ಬದಲಾವಣೆ ಬೇಡಿಕೆ ಅಪ್ರಸ್ತುತ. ಮುಂದಿನ 15 ವರ್ಷಗಳಿಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಹಿಂದಿನಿಂದಲೂ ಹೇಳುತ್ತಿದ್ದೇನೆ. ಅವರಿಗೆ ಬದ್ದತೆ ಇದೆ. ಬಡವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

ಅನೇಕ ವಿಷಯಗಳಲ್ಲಿ ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದೇನೆ. ಅವರ ಒಳಿತಿಗಾಗಿಯೇ ನೀಡಿರುವ ಆ ಸಲಹೆಗಳನ್ನು ಅವರು ಅರ್ಥ ಮಾಡಿಕೊಳ್ಳದಿದ್ದರೆ ನಾನು ಜವಾಬ್ದಾರನಲ್ಲ ಎಂದರು.

ಸಚಿವ ಸಂಪುಟದಲ್ಲಿ ಬಿಲ್ಲವರಿಗೆ ಪ್ರಾತಿನಿಧ್ಯ ತಪ್ಪಿಸಿರುವುದು ಆಸ್ಕರ್ ಫೆರ್ನಾಂಡಿಸ್ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ. ಈ ಆರೋಪ ಹೊರಿಸಿದವರಿಗೆ ಮಾಹಿತಿಯ ಕೊರತೆಯಿದೆ. ಪ್ರತೀ ಜಾತಿಯವರಿಗೆ ಪ್ರಾತಿನಿಧ್ಯ ಪಡೆಯಬೇಕು ಎನ್ನುವ ಹಂಬಲ ಇರುವುದು ಮತ್ತು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದು ತಪ್ಪಲ್ಲ. ಆದರೆ ಪ್ರತೀ ಬಾರಿ ಎಲ್ಲರಿಗೂ ಪ್ರಾತಿನಿಧ್ಯ ಒದಗಿಸುವುದು ಕಷ್ಟ ಎಂದವರು ಸ್ಪಷ್ಟನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಮಹಾಬಲ ಮಾರ್ಲ, ಪುರುಷೋತ್ತಮ ಚಿತ್ರಾಪುರ, ಉಮೇಶ್‌ಚಂದ್ರ, ಟಿ.ಕೆ. ಸುಧೀರ್, ನಾಗವೇಣಿ, ರಮಾನಂದ ಪೂಜಾರಿ, ನಿರಜ್ ಪಾಲ್, ಕರುಣಾಕರ ಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News