×
Ad

ಕಾಪುವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಒತ್ತಾಯಿಸಿ ನಿರ್ಣಯ ಅಂಗೀಕಾರ

Update: 2016-07-02 18:50 IST

ಕಾಪು, ಜು.2: ಕಾಪು ಪುರಸಭೆಯಲ್ಲಿ ಶನಿವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಕಾಪುವನ್ನು ತಾಲೂಕು ಕೇಂದ್ರವಾಗಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ತಾಲೂಕು ರಚನೆಯ ಬಗ್ಗೆ ವಿಷಯ ಪ್ರಸ್ತಾಪಿಸಿದ ಕಾಪು ಶಾಸಕ ವಿನಯಕುಮಾರ್ ಸೊರಕೆ, ಎಂ.ಬಿ. ಪ್ರಕಾಶ್ ಸಮಿತಿ ತಾಲೂಕು ರಚನೆ ಬಗ್ಗೆ ಸರಕಾರಕ್ಕೆ ಶಿಫಾರಸು ಸಲ್ಲಿಸಿತ್ತು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಬಳಿಗೆ ನಿಯೋಗ ತೆರಳಿ ಮನವರಿಕೆ ಮಾಡಲಾಗುವುದು. ಸರ್ವಪಕ್ಷ ಹಾಗೂ ಸಾರ್ವಜನಿಕರ ಸಭೆ ನಡೆಸಲಾಗುವುದು ಎಂದರು. ಸೊರಕೆಯವರು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಆಡಳಿತ ಮತ್ತು ವಿಪಕ್ಷ ಸದಸ್ಯರೆಲ್ಲರೂ ಒಮ್ಮತದ ಬೆಂಬಲ ಸೂಚಿಸಿದರು.

ಕಾಪು ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆಯ ಬಗ್ಗೆ ವಿಪಕ್ಷ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಉತ್ತರಿಸಿದ ಸೊರಕೆ, ಮೂರು ಕೋಟಿ ರೂ. ವೆಚ್ಚದ ಕೊಳಚೆ ನೀರು ಶುದ್ಧೀಕರಣ ಘಟಕ ಕಾಮಗಾರಿ ಆರಂಭಿಕ ಹಂತದಲ್ಲಿದೆ. ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಎಲ್ಲೂರಿನಲ್ಲಿ 10 ಎಕರೆ ಜಾಗ ಗುರುತಿಸಲಾಗಿದ್ದು, 5 ಕೋಟಿ ರೂ. ಬಿಡುಗಡೆಯಾಗಿದೆ. ಈ ಯೋಜನೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗುವುದು. ತ್ಯಾಜ್ಯವನ್ನು ಗೊಬ್ಬರ ಮಾಡುವುದರಿಂದ ಗೊಬ್ಬರಕ್ಕೆ ಭಾರೀ ಬೇಡಿಕೆ ಇದೆ ಎಂದು ಸೊರಕೆ ಹೇಳಿದರು.

ಕಾಪು ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮಣಿಪುರದಿಂದ ಪುರಸಭಾ ವ್ಯಾಪ್ತಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡುವ 70 ಕೋಟಿ ರೂ. ಯೋಜನೆಗೆ ಜಲ ಮಂಡಳಿಯಿಂದ ಮಂಜೂರಾತಿ ದೊರೆತಿದೆ. ಸಚಿವ ಸಂಪುಟದ ಆಡಳಿತಾತ್ಮಕ ಅನುಮೋದನೆ ಹಂತದಲ್ಲಿದೆ. ಈ ಯೋಜನೆ ಕಾರ್ಯಗತವಾದಲ್ಲಿ ಪೈಪ್‌ಲೈನ್ ಹಾದು ಹೋಗುವ ಗ್ರಾಮಗಳಿಗೂ ನೀರು ಸರಬರಾಜು ಮಾಡಲಾಗುವುದು ಎಂದು ಸೊರಕೆ ನುಡಿದರು. ಬಂಗ್ಲೆ ಮೈದಾನದ ಬಳಿ ಪುರಸಭೆಯ ಹೊಸಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, 5 ಕೋಟಿ ರೂ. ಬಿಡುಗಡೆಯಾಗಿದೆ. ಕಾಪುವಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಮೀನಿನ ಅವಶ್ಯಕತೆ ಇದೆ.

ಪುರಸಭಾ ವ್ಯಾಪ್ತಿಯಲ್ಲಿ ಸರಕಾರಿ ಜಮೀನು ಇಲ್ಲದ ಕಾರಣ ನಿವೇಶನ ರಹಿತರಿಗೆ ವಸತಿ ಕಲ್ಪಿಸಲು ತೊಡಕಾಗಿದೆ. ಅದಕ್ಕಾಗಿ ವಸತಿ ಸಂಕೀರ್ಣ ನಿರ್ಮಿಸಲು ಬೆಳಪು ಗ್ರಾಮದ ವ್ಯಾಪ್ತಿಯಲ್ಲಿ ಸುಜ್ಲಾನ್ ಕಂಪೆನಿ ಬಾಡಿಗೆ ಪಡೆದಿರುವ ಜಾಗವನ್ನು ಗುರುತಿಸಲಾಗಿದೆ. ಅದನ್ನು ಖರೀದಿಸುವ ನಿಟ್ಟಿನಲ್ಲಿ ಈ ಜಮೀನನ್ನು ಇತರರಿಗೆ ಮಾರಾಟ ಮಾಡದಂತೆ ಕೆಐಎಡಿಬಿಗೆ ಮನವಿ ಮಾಡಲಾಗಿದೆ. ಎಸ್‌ಎಫ್‌ಸಿ ನಿಧಿಯಿಂದ ಆರು ಕೆರೆಗಳ ಅಭಿವೃದ್ಧಿ, ರುದ್ರಭೂಮಿ ಹಾಗೂ ಉದ್ಯಾನವನ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸದಸ್ಯ ಕಿರಣ್ ಆಳ್ವ, ಅನಿಲ್ ಕಾಪು ವಿವಿಧ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಪುರಸಭಾ ಅಧ್ಯಕ್ಷೆ ಸೌಮ್ಯಾ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಮುಖ್ಯಾಧಿಕಾರಿ ಮೆಬಲ್ ಡಿಸೋಜ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News