×
Ad

ಅಧಿಕಾರಿಗಳ ಕಾನೂನು ಕಟ್ಟುನಿಟ್ಟಿನಿಂದ ಚಾಲಕರಿಗೆ ಹೆತ್ತವರಿಗೆ ತೊಂದರೆಯಾಗಿದೆ- ಪುರಂದರ ಭಟ್

Update: 2016-07-02 18:52 IST

ಪುತ್ತೂರು,ಜು.2: ಒಂದೊಮ್ಮೆ ಕಾನೂನು ಸಡಿಲಗೊಳಿಸಿದ ಅಧಿಕಾರಿಗಳು ಇದೀಗ ಕಾನೂನು ಪಾಲನೆಗೆ ಹೊರಟು ರಿಕ್ಷಾದಲ್ಲಿ 6ಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕೊಂಡೊಯ್ಯದಂತೆ ಕಟ್ಟು ನಿಟ್ಟು ಮಾಡುತ್ತಿರುವುದರಿಂದ ರಿಕ್ಷಾ ಚಾಲಕರಿಗೆ ಮತ್ತು ಹೆತ್ತವರಿಗ ತೊಂದರೆಯಾಗಿದೆ ಎಂದು ಕರ್ನಾಟಕ ರಿಕ್ಷಾ ಚಾಲಕ ಮಾಲಕ ಸಂಘದ ಗೌರವ ಅಧ್ಯಕ್ಷ ಬಿ. ಪುರಂದರ ಭಟ್ ಹೇಳಿದರು.

  ಅವರು ಕುಂದಾಪುರದ ತ್ರಾಸಿ ಎಂಬಲ್ಲಿ ವಾಹನವೊಂದು ಅಪಘಾತಕ್ಕೀಡಾಗಿ 8 ಶಾಲಾ ಮಕ್ಕಳು ಸಾವನ್ನಪ್ಪಿದ್ದ ಘಟನೆಯನ್ನು ಮುಂದಿಟ್ಟುಕೊಂಡು ಪೊಲೀಸರು ಮತ್ತು ಸಾರಿಗೆ ಇಲಾಖೆ ಶಾಲಾ ಮಕ್ಕಳನ್ನು ಸಾಗಿಸುವ ರಿಕ್ಷಾಗಳಲ್ಲಿ 6ಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸಬಾರದು ಎಂಬ ನಿರ್ಬಂಧ ಹೇರಿ ದಂಡ ವಿಧಿಸುತ್ತಿರುವುದನ್ನು, ಚಾಲಕರಿಗೆ ಬ್ಯಾಡ್ಜ್ ನಂಬ್ರ ನೀಡದಿರುವುದನ್ನು ಮತ್ತು ಪುತ್ತೂರು ತಾಲೂಕಿನಲ್ಲಿ ಹೊಸ ರಿಕ್ಷಾಗಳಿಗೆ ಪರವಾನಿಗೆ ನೀಡುತ್ತಿರುವುದನ್ನು ವಿರೋಧಿಸಿ ರಿಕ್ಷಾ ಚಾಲಕ ಮಾಲಕರ ಸಂಯುಕ್ತ ಹೋರಾಟ ಸಮಿತಿಯ ವತಿಯಿಂದ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಆರಕ್ಕಿಂತ ಹೆಚ್ಚು ಮಕ್ಕಳನ್ನು ರಿಕ್ಷಾದಲ್ಲಿ ಕರೆದೊಯ್ಯಬಾರದು ಎಂಬ ನಿಯಮ ಹಿಂದಿನಿಂದಲೇ ಇತ್ತು. ಆಗಲೇ ಅಧಿಕಾರಿಗಳು ಕಟ್ಟು ನಿಟ್ಟು ಮಾಡುತ್ತಿದ್ದರೆ ಆರಕ್ಕಿಂತ ಹೆಚ್ಚು ಮಕ್ಕಳು ಹೋಗುವ ಸಂಧರ್ಭ ಬರುತ್ತಿರಲಿಲ್ಲ. ಅಂದು ಕಾನೂನು ಸಡಿಲ ಮಾಡಿ ಕೊಟ್ಟ ಅಧಿಕಾರಿಗಳೇ ಇಂದು ಕಾನೂನು ಪಾಲನೆಗೆ ಹೊರಟಿದ್ದು ಚಾಲಕರಿಗೆ, ಹೆತ್ತವರಿಗೆ ತೊಂದರೆಯಾಗಿದೆ ಆರಂಭದಿಂದಲೂ ಕಾನೂನು ಪಾಲಿಸುತ್ತಿದ್ದರೆ ಇದೀಗ ಸಮಸ್ಯೆಯೇ ಬರುತ್ತಿರಲಿಲ್ಲ ಎಂದ ಅವರು ಪುತ್ತೂರಿನಂತಹ ಸಣ್ಣ ತಾಲೂಕಿಗೆ ನಾಲ್ಕು ಸಾವಿರಕ್ಕಿಂತಲೂ ಅಧಿಕ ರಿಕ್ಷಾಗಳಿಗೆ ಪರವಾನಿಗೆ ನೀಡಲಾಗಿದೆ. ಪುತ್ತೂರು ನಗರದ ಧಾರಣಾ ಸಾಮರ್ಥ್ಯ ಎಷ್ಟು ಎಂಬುದನ್ನು ಅಧ್ಯಯನ ಮಾಡದೆ ಪರವಾನಿಗೆ ನಿಡಲಾಗುತ್ತಿದೆ. ಸಾರಿಗೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದನ್ನೆಲ್ಲ ನಿರ್ಲಕ್ಷ್ಯ ಮಾಡಿ ಬೇಕಾಬಿಟ್ಟಿ ಪರವಾನಗಿ ನೀಡಿದ ಕಾರಣ ರಿಕ್ಷಾಗಳ ಸಂಖ್ಯೆಯೂ ಮಿತಿ ಮೀರಿದೆ ಎಂದರು. ಬಿಎಂಎಸ್ ಸಂಘಟನೆ ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್ ಮಾತನಾಡಿ ರಿಕ್ಷಾ ಚಾಲಕರು ಬಹುಪಾಲು ಪ್ರಾಮಾಣಿಕರು. ಅವರಲ್ಲಿ ಸೇವಾ ಕಳಕಳಿ ಇದೆ. ಕಾನೂನು ಅನುಷ್ಠಾನದ ಜತೆಯಲ್ಲಿ ಸ್ವಲ್ಪ ಮಟ್ಟಿನ ಮಾನವೀಯ ಅಂಶವನ್ನೂ ಗಮನಿಸುವ ಅಗತ್ಯತೆ ಇದೆ. ನಾನು 40 ವರ್ಷಗಳಿಂದ ಪುತ್ತೂರಿನಲ್ಲಿ ವೈದ್ಯನಾಗಿದ್ದೇನೆ. ಇಲ್ಲಿಯವರೆಗೂ ರಿಕ್ಷಾ ಚಾಲಕರ ನಿರ್ಲಕ್ಷ್ಯದಿಂದಾಗಿ ಶಾಲಾ ಮಕ್ಕಳು ದುರಂತಕ್ಕೆ ಈಡಾಗಿಲ್ಲ ಎಂದರು.

ಸಂಯುಕ್ತ ಹೋರಾಟ ಸಮಿತಿಯ ಅಧ್ಯಕ್ಷ ದಿಲೀಪ್ ಮೊಟ್ಟೆತ್ತಡ್ಕ ಮಾತನಾಡಿ, ಆರಕ್ಕಿಂತ ಹೆಚ್ಚಿನ ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ನಮ್ಮ ಮೇಲೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ನಾವು ಎಷ್ಟು ದಿನಾಂತ ದಂಡ ಕಟ್ಟಲು ಸಾಧ್ಯ. ಇದು ಕೇವಲ ಆಟೋದವರ ಸಮಸ್ಯೆಯಲ್ಲ. ಹೆತ್ತವರಿಗೂ ಈ ಸಮಸ್ಯೆ ತಟ್ಟುತ್ತದೆ. ಹತ್ತು ಮಕ್ಕಳನ್ನು ಕೊಂಡೊಯ್ಯಲು ಅವಕಾಶ ಕೇಳಿದ್ದೇವೆ. ಭರವಸೆ ಸಿಕ್ಕಿಲ್ಲ. ಹೀಗಾದರೆ ಆಟೋದವರು ಶಾಲಾ ಬಾಡಿಗೆ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದರು.

ಬಿಎಂಎಸ್ ಸಂಯೋಜಿತ ರಿಕ್ಷಾ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ರಂಜನ್, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಮುಖಂಡರಾದ ಜಯರಾಮ್ ಕುಲಾಲ್, ಸ್ನೇಹ ಸಂಗಮ ರಿಕ್ಷಾ ಸಂಘಟನೆ ಮುಖಂಡ ಲೋಕೇಶ್ ಗೌಡ, ಎಸ್‌ಡಿಟಿಯು ಅಧ್ಯಕ್ಷ ಬಾತಿಷಾ ಬಡಕ್ಕೋಡಿ ಮತ್ತು ಗೌರವಾಧ್ಯಕ್ಷ ಸಿದ್ದಿಕ್ ಮೊದಲಾದ ಗಣ್ಯರು ಭಾಗವಹಿಸಿದ್ದರು. ಪುತ್ತೂರಿನಲ್ಲಿ ರಿಕ್ಷಾಗಳ ಸಂಖ್ಯೆ ಹೆಚ್ಚಿರುವ ಕಾರಣ ಪರವಾನಗಿ ನೀಡುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಈ ಸಂದರ್ಭ ಆಗ್ರಹಿಸಲಾಯಿತು.

ಅಟೋ ರಿಕ್ಷಾ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

 ಸಂಯುಕ್ತ ಹೋರಾಟ ಸಮಿತಿಯು ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಕರೆ ನೀಡಿದ ಬಂದ್‌ಗೆ ಪುತ್ತೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ಸಂಜೆಯ ತನಕ ತಾಲೂಕಿನಲ್ಲಿ ಯಾವುದೆ ರಿಕ್ಷಾಗಳು ಓಡಾಟ ನಡೆಸದೆ ಬಂದ್ ನಡೆಸುವಂತೆ ಹೋರಾಟ ಸಮಿತಿಯ ಮುಖಂಡರು ಕರೆ ನೀಡಿದ್ದರು. ಆದರೆ ಬೆಳಗ್ಗಿನ ವೇಳೆಯಲ್ಲಿ ಕೆಲ ಕಾಲದ ತನಕ ಮಾತ್ರ ಬಂದ್ ನಡೆಸಿದ ರಿಕ್ಷಾ ಚಾಲಕರು ಬಳಿಕ ಎಂದಿನಂತೆ ಓಡಾಟ ಆರಂಭಿಸಿದ್ದರು. ರಿಕ್ಷಾ ಚಾಲಕ ಮಾಲಕರು ಬೆಳಿಗ್ಗೆ 10 ಗಂಟೆಗೆ ಪುತ್ತೂರಿನ ಬಸ್ಸು ನಿಲ್ದಾಣದ ಬಳಿ ಸೇರಿ ಬಳಿಕ ಅಲ್ಲಿಂದ ಮುಖ್ಯ ರಸ್ತೆಯ ಮೂಲಕ ಮಿನಿವಿಧಾನ ಸೌಧದ ಬಳಿಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ಹೋರಾಟ ಸಮಿತಿಯ ಸಂಚಾಲಕ ದಿಲೀಪ್ ಕುಮಾರ್ ಮೊಟ್ಟೆತ್ತಡ್ಕ, ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಂಜನ್, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯರಾಮ ಕುಲಾಲ್, ಸ್ನೇಹ ಸಂಗಮ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಎಸ್‌ಡಿಪಿಐ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾತೀಷ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಫೋಟೋ: ಪುತ್ತೂರು ಮಿನಿವಿಧಾನ ಸೌಧದ ಮುಂಭಾಗದಲ್ಲಿ ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News