×
Ad

ಸುಳ್ಯ: ಫಸಲ್‌ಬಿಮಾ ಯೋಜನೆಯನ್ನು ವಿರೋಧಿಸಲು ನಿರ್ಣಯ

Update: 2016-07-02 19:06 IST

ಸುಳ್ಯ, ಜು.2: ತಾಲೂಕು ಸಹಕಾರಿ ಯೂನಿಯನ್ ನೇತೃತ್ವದಲ್ಲಿ ತಾಲೂಕಿನ ಸಹಕಾರಿ ಪ್ರಾಥಮಿಕ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಸುಳ್ಯ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಯೂನಿಯನ್ ಅಧ್ಯಕ್ಷ ಹರೀಶ್ ಉಬರಡ್ಕ ಅಧ್ಯಕ್ಷತೆ ವಹಿಸಿದ್ದರು. ಫಸಲ್‌ಭಿಮಾ ಯೋಜನೆಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಿತು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ ಮಾತನಾಡಿ, ಬೆಳೆ ವಿಮೆ ಬೇಕು. ಆದರೆ ಫಸಲ್‌ಬಿಮಾ ಯೋಜನೆ ಅವೈಜ್ಞಾನಿಕವಾದದ್ದು. ಬೆಳೆ ವೈವಿಧ್ಯತೆ ಗಮನಕ್ಕೆ ತಾರದೇ ಇದನ್ನು ರೂಪಿಸಲಾಗಿದೆ. ಉಪಬೆಳೆಗಳಿಗೆ ಇದರ ಲಾಭ ಸಿಗುವುದಿಲ್ಲ. ತಾಲೂಕಿಗೆ 18 ಕೋಟಿ ಪ್ರೀಮಿಯಂ ಗುರಿ ನಿಗದಿ ಮಾಡಲಾಗಿದೆ. ಡಿಸಿಸಿ ಬ್ಯಾಂಕ್‌ನ ಸೂಪರ್‌ವೈಸರ್‌ಗಳಿಗೆ ಗುರಿಯನ್ನು ಹಂಚಲಾಗಿದೆ. ಸರಕಾರವೇ ಪೂರ್ಣ ಪ್ರೀಮಿಯಂ ಕಟ್ಟುವುದಿದ್ದರೆ ಆಗಬಹುದು. ಎಲ್ಲಾ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳು ಇದರ ವಿರುದ್ಧ ನಿರ್ಣಯ ತೆಗೆದುಕೊಳ್ಳಬೇಕು ಎಂದರು.

ಸಹಕಾರಿ ಸಂಘಗಳಿಗೆ ಸದಸ್ಯರು ಸ್ವ ಆಸಕ್ತಿಯಿಂದ ಸೇರಬೇಕು. ಸರಕಾರವೇ ಒತ್ತಾಯಪೂರ್ವಕವಾಗಿ ಸೇರ್ಪಡೆ ಮಾಡುವುದು ಸರಿಯಲ್ಲ. ಜಿಲ್ಲೆಯಲ್ಲಿ ಯಶಸ್ವಿನಿ ಯೋಜನೆಯೂ ಯಶಸ್ವಿಯಾಗಿಲ್ಲ. ಪಾಲಿಸಿ ಪ್ರಮಾಣದಲ್ಲಿ ಯಶಸ್ವಿಯಾದರೂ ಕ್ಲೈಂ ಮಾಡುವುದರಲ್ಲಿ ಯಶಸ್ವಿಯಾಗಿಲ್ಲ. ಫಸಲ್‌ಬಿಮಾ ಕೂಡಾ ಕರಾವಳಿ ಜಿಲ್ಲೆಗೆ ಸೂಕ್ತವಲ್ಲ ಎಂದವರು ಹೇಳಿದರು.

ತಾಲೂಕು ಸಹಕಾರಿ ಯೂನಿಯನ್ ಉಪಾಧ್ಯಕ್ಷ ವಿಷ್ಣುಭಟ್, ಕಾರ್ಯದರ್ಶಿ ವೆಂಕಟ್ರಮಣ ಮುಳ್ಯ, ಖಜಾಂಜಿ ಪ್ರಭಾಕರ ನಾಯಕ್, ಎ.ಟಿ.ಕುಸುಮಾಧರ, ಶೈಲೇಶ್ ಅಂಬೆಕಲ್ಲು, ಸುಬೋಧ್ ಶೆಟ್ಟಿ ಮೇನಾಲ, ಐ.ಕೆ.ಹೇಮಚಂದ್ರ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News