×
Ad

ಮುಂಡೂರು: ಹೋಬಳಿ ಮಟ್ಟದ ಕಂದಾಯ ಅದಾಲತ್

Update: 2016-07-02 19:29 IST

ಪುತ್ತೂರು, ಜು.2: ಸರ್ವೆ, ಮುಂಡೂರು, ಕೆದಂಬಾಡಿ ಗ್ರಾಮಗಳ ಪುತ್ತೂರು ಹೋಬಳಿ ಮಟ್ಟದ ಕಂದಾಯತ್ ಅದಾಲತ್ ಕಾರ್ಯಕ್ರಮ ಮುಂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಅದಾಲತ್‌ನಲ್ಲಿ ಮಾತನಾಡಿದ ಪುತ್ತೂರು ತಹಶೀಲ್ದಾರ್ ಪುಟ್ಟುಸ್ವಾಮಿ, ಸಾರ್ವಜನಿಕರು ತಾಲೂಕು ಕಚೇರಿಯಲ್ಲಿ ದಿನವಿಡೀ ಅಲೆದಾಡಿ ತಮ್ಮ ಕೆಲಸವಾಗಿಲ್ಲ ಎಂದು ಮನೆಗೆ ವಾಪಸ್ ಬರುವ ಪ್ರಮೇಯವನ್ನು ಇಲ್ಲದಾಗಿಸಿ ಯಾವುದೇ ಕೆಲಸಗಳನ್ನು ತಡ ಮಾಡದೇ ಸಾಧ್ಯವಾದಷ್ಟು ಬೇಗ ಮಾಡಿಸಿಕೊಡುವ ಉದ್ದೇಶಕ್ಕಾಗಿ ಸರಕಾರ ಕಂದಾಯತ್ ಅದಾಲತ್‌ನ್ನು ಜನರ ಮನೆ ಬಾಗಿಲಿನಲ್ಲಿ ನಡೆಸುತ್ತಿದೆ ಎಂದು ಹೇಳಿದರು.

ಮುಂಡೂರು ಗ್ರಾ.ಪಂ ಅಧ್ಯಕ್ಷ ಎಸ್.ಡಿ ವಸಂತ ಮಾತನಾಡಿ, ಪಹಣಿ ಪತ್ರಗಳಲ್ಲಿರುವ ವ್ಯತ್ಯಾಸ, ಗೊಂದಲಗಳನ್ನು ತಿದ್ದುಪಡಿ ಮಾಡಲು ಮತ್ತು ಸಮಸ್ಯೆ ನಿವಾರಿಸಲು ಕಂದಾಯ ಅದಾಲತ್ ಏರ್ಪಡಿಸಲಾಗಿದೆ. ಪೇಟೆಯ ನಿವಾಸಿಗಳಿಗೆ ಹೋಲಿಸಿದರೆ ಹಳ್ಳಿಯ ರೈತರಿಗೆ ತಮ್ಮ ಅಗತ್ಯ ದಾಖಲೆಗಳನ್ನು ಸರಿಪಡಿಸುವ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಹಾಗಾಗಿ ಗ್ರಾಮ ವ್ಯಾಪ್ತಿಗಳಲ್ಲಿ ಮಾಡುವುದರಿಂದ ಹೆಚ್ಚು ಉಪಕಾರಿಯಾಗಿದೆ ಎಂದು ಹೇಳಿದರು.

ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ, ಈ ಹಿಂದೆ ನಡೆದಿದ್ದ ಕಂದಾಯ ಅದಾಲತ್‌ಗೆ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಜೊತೆಗೆ ಕಂಪ್ಯೂಟರ್‌ಗಳನ್ನು ತಂದು ಆಗಲೇ ಅಪ್‌ಲೋಡ್ ಮಾಡುತ್ತಿದ್ದರು. ಆದರೆ ಈ ಬಾರಿ ಅಧಿಕಾರಿಗಳು ಮಾತ್ರ ಬಂದಿದ್ದು, ಕಂಪ್ಯೂಟರೀಕರಣ ಗೊಳಿಸದಿರುವ ಬಗ್ಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್, ಪಹಣಿ ಮತ್ತಿತರ ಯಾವುದೇ ಸಮಸ್ಯೆಗಳಿದ್ದರೂ ನಮಗೆ ಅದನ್ನು ಇಂದೇ ಸರಿಪಡಿಸಲು ಆಗುವುದಿಲ್ಲ, ಅದನ್ನು ಸರಿಪಡಿಸಲು ಕಾಲಾವಕಾಶ ಬೇಕಾಗಿದ್ದು ಅವೆಲ್ಲವನ್ನೂ ಮತ್ತೆ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡುತ್ತೇವೆ ಎಂದು ಹೇಳಿದರು.

2005-06ರಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ 2012-13ರಲ್ಲಿ ಡೋರ್ ನಂಬರ್ ಸಿಕ್ಕಿದೆ. 94 ಸಿಯಲ್ಲಿ 2013ರ ನಂತರ ಡೋರ್ ನಂಬರ್ ಆದವರಿಗೆ ಹಕ್ಕು ಪತ್ರ ಲಭಿಸುತ್ತಿದೆ. ಇದಕ್ಕೆ ಏನು ಪರಿಹಾರ ಎಂದು ಮುಂಡೂರು ಗ್ರಾ.ಪಂ ಸದಸ್ಯ ಶಿವನಾಥ ರೈ ಮೇಗಿನಗುತ್ತು ಕೇಳಿದರು. ಇದಕ್ಕೆ ತಹಶೀಲ್ದಾರ್ ಉತ್ತರಿಸಿ ಇದಕ್ಕೆ ಗ್ರಾಮ ಪಂಚಾಯತ್‌ನಿಂದ ಧೃಢೀಕರಣ ಪತ್ರ ಕೊಡಿ. ಸರಿಪಡಿಸುವ ವ್ಯವಸ್ಥೆ ಇದೆ ಎಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ಹೋಬಳಿ ಕಂದಾಯ ನಿರೀಕ್ಷಕ ದಯಾನಂದ್, ಶಿರಸ್ತೇದಾರ ಗುಡ್ಡಪ್ಪ ಶೆಟ್ಟಿ, ತಾ.ಪಂ ಸದಸ್ಯ ಶಿವರಂಜನ್ ಉಪಸ್ಥಿತರಿದ್ದರು. ಗ್ರಾಮ ಕರಣಿಕೆ ತುಳಸಿ ವಂದಿಸಿದರು. ಸಭೆಯಲ್ಲಿ ಮುಂಡೂರು ಗ್ರಾ.ಪಂ ಸದಸ್ಯರಾದ ಉದಯಕುಮಾರ್, ಹಂಝ, ಮಾಜಿ ಸದಸ್ಯ ಬಾಲಚಂದ್ರ ಗೌಡ, ಸುರೇಶ್ ಕಣ್ಣರಾಯ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News