ಕೊಣಾಜೆ: ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ನಿಧನಕ್ಕೆ ಸಂತಾಪ

Update: 2016-07-02 14:18 GMT

ಕೊಣಾಜೆ, ಜು.2: ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ, ಪ್ರಸಂಗಕರ್ತ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರ ನಿಧನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಸಂತಾಪ ವ್ಯಕ್ತಪಡಿಸಿದೆ.

ತೆಂಕು ಮತ್ತು ಬಡಗುತಿಟ್ಟಿನ ಮೇರು ಕಲಾವಿದರಾಗಿ, ತಾಳಮದ್ದಳೆ ಅರ್ಥದಾರಿಯಾಗಿ ಕನ್ನಡ ಮತ್ತು ತುಳು ಪ್ರಸಂಗಕರ್ತರಾಗಿ ಮೆರೆದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು ಸಿದ್ದಿ ಮತ್ತು ಪ್ರಸಿದ್ದಿಯ ನೆಲೆಯಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದರು. ಯಕ್ಷಗಾನದ ಹಿನ್ನೆಲೆಯಿಂದ ಬಂದಿಲ್ಲವಾದರೂ ಶ್ರದ್ದೆ ಮತ್ತು ಪರಿಶ್ರಮದ ಮೂಲಕ ಯಕ್ಷಗಾನದ ಅರ್ಥಗಾರಿಕೆ ಕಲಿತು ಸ್ವಪ್ರಯತ್ನದಿಂದ ಸುದೀರ್ಘ ಕಾಲ ಯಕ್ಷರಂಗದಲ್ಲಿ ತೊಡಗಿಸಿಕೊಂಡು ಹೊಸ ವೈಭವವನ್ನು ಸೃಷ್ಟಿಸಿದ್ದರು. ಕಟೀಲು, ಕದ್ರಿ, ಮಂಗಳಾದೇವಿ, ಕರ್ನಾಟಕ ಮೇಳಗಳಲ್ಲಿ ವೃತ್ತಿಕಲಾವಿದರಾಗಿ ದುಡಿದ ಇವರು ಬಳಿಕ ಬಡಗುತಿಟ್ಟಿನತ್ತ ಹೊರಳಿಕೊಂಡು ಸಾಲಿಗ್ರಾಮ, ಹಿರಿಯಡ್ಕ ಮೇಳಗಳಲ್ಲಿನ ಕಲಾವಿದರಾಗಿ ಜನಮನ್ನಣೆಗೆ ಪಾತ್ರರಾಗಿದ್ದರು. ತಮ್ಮ ವಿಶಿಷ್ಟವಾದ ವಾಕ್ಚಾತುರ್ಯದಿಂದ ಅರ್ಥಗಾರಿಕೆಗೆ ಹೊಸ ಮೆರುಗು ತಂದುಕೊಟ್ಟ ಇವರನ್ನು ಅಭಿಮಾನಿಗಳು ಯಕ್ಷವಾಚಸ್ಪತಿ ಎಂಬ ಬಿರುದನ್ನು ನೀಡಿದ್ದರು.

ಇವರ ನಿಧನ ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರು ಮತ್ತು ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News