ಬೆಳ್ತಂಗಡಿ: ದೇವಾಲಯದಿಂದ ಲಕ್ಷಾಂತರ ರೂ.ಮೌಲ್ಯದ ಸೊತ್ತು ಕಳವು
ಉಪ್ಪಿನಂಗಡಿ, ಜು.2: ದೇವಾಲಯಕ್ಕೆ ನುಗ್ಗಿದ ಕಳ್ಳರು ಅಲ್ಲಿದ್ದ ಚಿನ್ನ-ಬೆಳ್ಳಿಯ ಆಭರಣ, ನಗದು ಸೇರಿದಂತೆ ಸುಮಾರು 4.50 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವುಗೈದಿರುವುದು ಶನಿವಾರ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ವರದಿಯಾಗಿದೆ.
ದೇವಾಲಯದ ಮುಂಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿರುವ ಕಳ್ಳರು ಗರ್ಭಗುಡಿಯ ಬಳಿ ಹೊರಾಂಗಣದಲ್ಲಿ ಇಡಲಾಗಿದ್ದ ಕಾಣಿಕೆ ಡಬ್ಬಿಯ ಲಾಕರ್ ಅನ್ನು ಒಡೆದು ಅದರಲ್ಲಿದ್ದ ಒಂದೂವರೆ ಪವನ್‌ನ ಚಿನ್ನದ ಸರ, ಚಿನ್ನದ ಸರಿಗೆ, 10 ಬೆಳ್ಳಿಯ ಮುಖವಾಡ ಸೇರಿದಂತೆ ಸುಮಾರು 4 ಕೆ.ಜಿ. ಬೆಳ್ಳಿಯ ಸೊತ್ತುಗಳು ಹಾಗೂ ಅದರಲ್ಲಿದ್ದ ನಗದನ್ನು ಕಳವುಗೈದಿದ್ದಾರೆ. ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ 4.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ದೇವಾಲಯದ ಸಿಬ್ಬಂದಿ ಜಯ ಶೆಟ್ಟಿ ಎಂಬವರು ಶನಿವಾರ ಬೆಳಗ್ಗೆ ದೇವಾಲಯಕ್ಕೆ ಬಂದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ. ಬಾಗಿಲಿನ ಬೀಗವನ್ನು ದೇವಸ್ಥಾನದ ಆವರಣದಲ್ಲಿ ಬಿಸಾಡಿರುವ ಕಳ್ಳರು ಸೊತ್ತುಗಳೊಂದಿಗೆ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಪುತ್ತೂರು ಎಎಸ್ಪಿ ರಿಷ್ಯಂತ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ಉಪ್ಪಿನಂಗಡಿ ಠಾಣಾಧಿಕಾರಿ ತಿಮ್ಮಪ್ಪ ನಾಯ್ಕ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ತಪಾಸಣೆಗೊಳಪಡಿಸಲಾಗಿದೆ. ದೇವಾಲಯದ ಆಡಳಿತ ಮೊಕ್ತೇಸರ ದಿನಕರ ಪೂಜಾರಿ ಕಡ್ತಿಲ ನೀಡಿದ ದೂರನ್ನು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎರಡನೆ ಬಾರಿ ಕಳ್ಳತನ
ಎರಡು ವರ್ಷಕ್ಕೆ ಮೊದಲು ಇದೇ ದೇವಸ್ಥಾನದಲ್ಲಿ ಕಳವಾಗಿತ್ತು. ಆ ಸಂದರ್ಭ ಸುಮಾರು 60 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕದ್ದೊಯ್ಯಲಾಗಿತ್ತು. ಆದರೆ ಈತನಕವೂ ಕಳ್ಳರ ಪತ್ತೆ ಮಾತ್ರ ಸಾಧ್ಯವಾಗಿಲ್ಲ. ಆದರೆ, ಗ್ರಾಮಾಂತರ ಪ್ರದೇಶವಾಗಿರುವ ಕೊರಿಂಜದ ಇದೇ ದೇವಸ್ಥಾನದಲ್ಲಿ ಈಗ ಮತ್ತೊಮ್ಮೆ ಕಳವಾಗಿದೆ. ಎರಡು ವರ್ಷಗಳ ಹಿಂದೆ ನವರಾತ್ರಿಯ ಕೊನೆಯ ದಿನ ಇಲ್ಲಿ ಕಳವಾಗಿತ್ತು. ನವರಾತ್ರಿಯ ಕೊನೆಯ ದಿನ ರಾತ್ರಿ ಪೂಜೆ ಮುಗಿಯುವಾಗ ತಡವಾಗಿದ್ದರಿಂದ ಶ್ರೀ ದೇವಿಯ ವಿಗ್ರಹದಲ್ಲಿದ್ದ ಆಭರಣಗಳನ್ನು ಬೆಳಗ್ಗೆ ಬೇಗನೆ ಬಂದು ಈ ಆಭರಣವನ್ನು ತೆಗೆದು ಲಾಕರ್‌ನಲ್ಲಿಡುವ ಬಗ್ಗೆ ತೀರ್ಮಾನಿಸಿದ ದೇವಳದ ಆಡಳಿತ ಮಂಡಳಿಯವರು ದೇವಸ್ಥಾನಕ್ಕೆ ಬೀಗ ಹಾಕಿ ತೆರಳಿದ್ದರು. ಆದರೆ, ಮರುದಿನ ಬರುವಾಗ ಶ್ರೀ ದೇವಿಯ ಗುಡಿಯ ಬೀಗವನ್ನು ಮಾತ್ರ ಮುರಿದು ಅಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವುಗೈಯಲಾಗಿತ್ತು. ಈ ಸಂದರ್ಭ ಲಾಕರ್‌ನಲ್ಲಿ ಇನ್ನಷ್ಟು ಆಭರಣಗಳಿದ್ದರೂ ಅದನ್ನು ಮುಟ್ಟಿರಲಿಲ್ಲ. ಈ ಲಾಕರ್ ಮಾತ್ರ ಒಡೆದು ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಲಾಗಿದೆ.
ಕಳೆದ ಸಂಕ್ರಮಣ ಸಮಯದಲ್ಲಿ ಅದರಲ್ಲಿದ್ದ ಕಾಣಿಕೆ ಹಣವನ್ನು ತೆಗೆದಿರುವುದರಿಂದ ಹೆಚ್ಚಿನ ಹಣ ಕಳ್ಳರ ಪಾಲಾಗುವುದು ತಪ್ಪಿದೆ. ಆಭರಣವಿದ್ದಲ್ಲಿ ಮಾತ್ರ ಕನ್ನ ಹಾಕುವ ಕಳ್ಳರ ಕಾರ್ಯವೈಖರಿಯನ್ನು ನೋಡಿದರೆ, ದೇವಸ್ಥಾನದ ಬಗ್ಗೆ ಚೆನ್ನಾಗಿ ಬಲ್ಲ ಸ್ಥಳೀಯರಿಂದಲೇ ಕಳ್ಳರಿಗೆ ಮಾಹಿತಿ ದೊರೆತಿರುವ ಶಂಕೆ ವ್ಯಕ್ತವಾಗುತ್ತಿದೆ.