×
Ad

ಪುತ್ತೂರು: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಇಫ್ತಾರ್ ಕೂಟ

Update: 2016-07-02 20:56 IST

ಪುತ್ತೂರು, ಜು.2: ಮೂವತ್ತು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಶಾಸಕನಾಗಿದ್ದ ಸಂದರ್ಭ ಇಪ್ತಾರ್ ಕೂಟ ಆರಂಭಿಸಿದ್ದು, ಬಳಿಕ ಇಂದಿನ ತನಕ ನಿರಂತರವಾಗಿ ಈ ಕೂಟ ನಡೆಸಿಕೊಂಡು ಬರುತ್ತಿದ್ದೇನೆ. ಬಳಿಕದ ತನ್ನ ರಾಜಕೀಯ ಜೀವನದಲ್ಲಿ ಹಲವಾರು ಏರುಪೇರುಗಳು ನಡೆದಿದ್ದರೂ ಇಫ್ತಾರ್ ಕೂಟವನ್ನು ನಿಲ್ಲಿಸಿಲ್ಲ. ಇಲ್ಲಿನ ಜನರು ನನ್ನ ರಾಜಕೀಯ ಬದುಕಿಗೆ ನೀಡಿದ ಕೊಡುಗೆಯನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.

ಪುತ್ತೂರಿನ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಸಂಜೆ ತಮ್ಮ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಇಫ್ತಾರ್ ಕೂಟವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾನು ಅಧಿಕಾರದಲ್ಲಿ ಇದ್ದರೂ, ಇಲ್ಲದಿದ್ದರೂ ಜನರು ನನ್ನ ಮೇಲಿನ ನಂಬಿಕೆ, ವಿಶ್ವಾಸ ಉಳಿಸಿಕೊಂಡೇ ಬಂದಿದ್ದಾರೆ. ಇದಕ್ಕಿಂತ ಮಿಗಿಲಾದ ಸಂಪತ್ತು ಸಾರ್ವಜನಿಕ ಜೀವನದಲ್ಲಿ ಬೇರೇನೂ ಇಲ್ಲ ಎಂದರು. ರಾಜಕೀಯ ಕಾರಣಕ್ಕೆ ಉಡುಪಿಗೆ ಹೋದ ಮೇಲೆ ಕೂಡಾ ಪ್ರತಿ ವರ್ಷ ಪುತ್ತೂರಿನ ಮೂರು ಕಾರ್ಯಕ್ರಮಗಳನ್ನು ನಾನು ತಪ್ಪಿಸಿಕೊಳ್ಳುತ್ತಿಲ್ಲ. ಒಂದು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಜೋಡುಕರೆ ಕಂಬಳ. ಇನ್ನೊಂದು ಕಿಲ್ಲೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ. ಮೂರನೆಯದು ರಮರಝಾನ್ ತಿಂಗಳಲ್ಲಿ ನಡೆಯುವ ಇಫ್ತಾರ್ ಕೂಟ. ಈ ಮೂರು ಕೂಡ ಜಾತ್ಯತೀತ ನೆಲೆಗಟ್ಟಿನಲ್ಲಿ ನಡೆಯುವ ಕಾರ್ಯಕ್ರಮಗಳು. ಇದಕ್ಕಾಗಿ ನಾನು ಇವುಗಳನ್ನು ತಪ್ಪಿಸುವುದಿಲ್ಲ ಎಂದು ಹೇಳಿದರು.

ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಎಲ್ಲ ಧರ್ಮಗಳಲ್ಲೂ ಉಪವಾಸ ವ್ರತಾಚರಣೆ ಇದೆ. ಉಪವಾಸದ ಮೂಲಕ ಸಂಯಮ ಕಂಡುಕೊಳ್ಳುವ ಮತ್ತು ಉಪವಾಸದ ಮೂಲಕ ಮತ್ತೊಬ್ಬರ ಹಸಿವು ಅರ್ಥ ಮಾಡಿಕೊಳ್ಳುವ ತತ್ವ ಪಾರಮಾರ್ಥಿಕವಾದುದು ಎಂದರು.

ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ. ದಾರಿಮಿ ರಮಝಾನ್ ಸಂದೇಶ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಪುಡಾ ಅಧ್ಯಕ್ಷ ಬೆಟ್ಟ ಈಶ್ವರ ಭಟ್, ಕಾಂಗ್ರೆಸ್ ಮುಖಂಡರಾದ ಸಿ.ಪಿ. ಜಯರಾಮ, ನಿರ್ಮಲ್ ಕುಮಾರ್ ಜೈನ್, ಕುಂಬ್ರ ಕೆಐಸಿ ಸಂಚಾಲಕ ಕೆ.ಪಿ.ಅಹ್ಮದ್ ಹಾಜಿ, ಜಿಲ್ಲಾ ವಕ್ಫ್ ಕಮಿಟಿ ಸದಸ್ಯ ಪಿ.ಬಿ. ಹಸನ್ ಹಾಜಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಜೆಡಿಎಸ್ ತಾಲೂಕು ಸಮಿತಿ ಅಧ್ಯಕ್ಷ ಇಬ್ರಾಹೀಂ ಗೋಳಿಕಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದಿನ್ ಅರ್ಶದ್ ದರ್ಬೆ ಮತ್ತಿತರರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ಸ್ವಾಗತಿಸಿದರು. ಇಸಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News