ಮಥುರಾ ಹಿಂಸಾಚಾರ: ರೂವಾರಿಯ ನಿಕಟವರ್ತಿಯ ಸಾವು

Update: 2016-07-02 15:26 GMT

ಮಥುರಾ, ಜು.2: ಜವಾಹರಬಾಗ್ ಹಿಂಸಾಚಾರಕ್ಕೆ ಕಾರಣವಾದ ಹೊಸ ಉಗ್ರವಾದಿ ಮಥುರಾಪಂಥವೊಂದರ ನಾಯಕ ರಾಮ್‌ವೃಕ್ಷ ಯಾದವ್‌ನ ನಿಕಟ ಸಹಾಯಕನೊಬ್ಬ ಮಥುರಾದ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಜೂ.4ರಂದು ಮಥುರಾ ಕಾರಾಗೃಹಕ್ಕೆ ಸೇರಿಸಲಾಗಿದ್ದ ಕಾನ್ಪುರ ದೆಹಾತ್‌ನ ನಿವಾಸಿ, ರಾಂಭರೋಸೆ ಎಂಬಾತನಿಗೆ ಎದೆ ನೋವು ಆರಂಭವಾಗಿತ್ತು. ಆತನನ್ನು ಕಾರಾಗೃಹದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆಯ ಮೇರೆಗೆ ರಾಂಭರೋಸೆಯನ್ನು ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆತ ಶುಕ್ರವಾರ ರಾತ್ರಿ 8ರ ಸುಮಾರಿಗೆ ಕೊನೆಯುಸಿರೆಳೆದನೆಂದು ಬಂದಿಖಾನೆಯ ಅಧೀಕ್ಷಕ ಪಿ.ಡಿ.ಸಲೋನಿಯಾ ವಿವರಿಸಿದ್ದಾರೆ.
ಜವಾಹರ್‌ಬಾಗ್‌ನ ಹೊರಗಡೆ ರಾಂಭರೋಸೆಯ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಆತನ ವಿರುದ್ಧ ಐಪಿಸಿಯ ಸೆ.302ರನ್ವಯ (ಕೊಲೆ) ಪ್ರಕರಣ ದಾಖಲಾಗಿದ್ದು, ನಗರ ಪೊಲೀಸ್ ಅಧೀಕ್ಷಕ ಮುಕುಲ್ ದ್ವಿವೇದಿಯ ಹತ್ಯೆಯಲ್ಲಿ ಅವನ ಪಾತ್ರವಿದ್ದ ಕುರಿತು ಶಂಕಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News