×
Ad

ಉಪ್ಪಿನಂಗಡಿ: ಶಾಲಾ ವಾಹನ ಚಾಲಕರ ಪರ ನಿಂತ ಮಕ್ಕಳ ಪೋಷಕರು

Update: 2016-07-02 21:52 IST

ಉಪ್ಪಿನಂಗಡಿ, ಜು.2: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ಮಕ್ಕಳ ಸಂಖ್ಯೆಯ ವಿಚಾರದಲ್ಲಿ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ನಿಯಮಾವಳಿಯನ್ನು ರೂಪಿಸಿ ಚಾಲಕರನ್ನು ದಂಡಿಸುವ ಕೆಲಸಗಳು ನಡೆಯುತ್ತಿದ್ದು, ಇದರಿಂದ ಮಕ್ಕಳೂ ಹಾಗೂ ಪೋಷಕರು ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಚಾಲಕರ ಬೆಂಬಲಕ್ಕೆ ನಾವಿದ್ದು, ಇಲಾಖಾಧಿಕಾರಿಗಳು ಇದನ್ನು ತಕ್ಷಣ ನಿಲ್ಲಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪೋಷಕ ಜಯಂತ ಪೊರೋಳಿ ಎಚ್ಚರಿಸಿದ್ದಾರೆ.

ಇಲಾಖೆಗಳ ಕಟ್ಟುನಿಟ್ಟಿನ ನಿಯಮಾವಳಿಯಿಂದ ಬೇಸತ್ತು ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ವಾಹನ ಚಾಲಕರು ಜು.2ರಿಂದ ಶಾಲಾ ಮಕ್ಕಳನ್ನು ಕರೆದೊಯ್ಯುವ ಕರ್ತವ್ಯವನ್ನು ಸ್ಥಗಿತಗೊಳಿಸಿರುವುದರಿಂದ ಸಾರಿಗೆ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರೆಲ್ಲಾ ಭಾರೀ ಸಂಖ್ಯೆಯಲ್ಲಿ ಒಂದಾಗಿ ಉಪ್ಪಿನಂಗಡಿಯ ಶ್ರೀ ಗುರುಸುಧೀಂದ್ರ ಕಲಾ ಮಂದಿರದಲ್ಲಿ ಇಂದು ನಡೆಸಿದ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಶುಲ್ಕ ತೆರಲೂ ಅಸಮರ್ಥರಾಗಿರುವ ಕುಟುಂಬದ ಮಕ್ಕಳಿಗೆ ಉಚಿತ ಪ್ರಯಾಣ ಸೇವೆ ನೀಡುವ ವಾಹನ ಚಾಲಕರನ್ನು ದಂಡಿಸುವ ಮೂಲಕ ಮಕ್ಕಳ ಪ್ರಾಣ ರಕ್ಷಣೆ ಮಾಡುತ್ತೇವೆ ಎಂಬ ಭ್ರಮೆ ಬೇಡ. ಬದಲಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕುಂಟು ಮಾಡುತ್ತೀದ್ದೀರಿ ಎಂಬ ಸತ್ಯವನ್ನು ಮೊದಲು ತಿಳಿಯಿರಿ. ಒಂದು ದಿನ ಸೇವೆ ಸ್ಥಗಿತ ಗೊಳಿಸಿದ ವಾಹನ ಚಾಲಕರ ನಡೆಯಿಂದಾಗಿ ಇಂದು ಶೇ.75 ರಷ್ಟು ಹಾಜರಾತಿ ಕುಸಿದಿದೆ. ನಿರಂತರ ವಿದ್ಯಾರ್ಥಿಗಳ ಹಾಜರಾತಿ ಕುಸಿಯಬೇಕೆಂಬ ಭಾವನೆ ಜಿಲ್ಲಾಡಳಿತದ್ದಾಗಿದ್ದರೆ ಶಾಲಾ ಮಕ್ಕಳ ವಾಹನಕ್ಕೆ ದಂಡ ವಿಧಿಸುವುದನ್ನು ಮುಂದುವರೆಸಿ. ಇಲ್ಲವಾದರೆ ಈ ಹಿಂದಿನಂತೆ ಮಕ್ಕಳನ್ನು ಸಾಗಿಸಲು ಅವಕಾಶ ಕಲ್ಪಿಸಿ. ಅಪಘಾತದ ನೈಜ ಕಾರಣವನ್ನು ಬದಿಗಿಟ್ಟು ಬಡಪಾಯಿ ಪೋಷಕರ ಬದುಕಿನಲ್ಲಿ ಚೆಲ್ಲಾಟವಾಡಿದರೆ ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದರು.

ಶ್ರೀ ರಾಮ ವಿದ್ಯಾಲಯದ ಸಂಚಾಲಕಿ ಯು.ಜಿ. ರಾಧಾ ಮಾತನಾಡಿ, ಕೇವಲ ಕಾನೂನು ಪಾಲನೆ ಮಾತ್ರವಲ್ಲ. ಅದರೊಂದಿಗೆ ಮಾನವೀಯತೆಯೂ ಇರಬೇಕು. ಹಲವು ವಾಹನ ಚಾಲಕರು ಕೆಲವು ವಿಕಲಾಂಗ ಸೇರಿದಂತೆ ಬಡ ಮಕ್ಕಳನ್ನು ಉಚಿತವಾಗಿ ಕರೆದುಕೊಂಡು ಬಂದು ಮಾನವೀಯತೆ ಮೆರೆಯುತ್ತಿದ್ದಾರೆ. ಇಲಾಖೆಗಳ ಬಿಗು ಕಾನೂನಿನಿಂದ ಈಗ ವಾಹನ ಚಾಲಕ ಮಾಲಕರು ಮಕ್ಕಳನ್ನು ಕರೆದೊಯ್ಯಲು ಹಿಂಜರಿಯುವ ಸ್ಥಿತಿ ಬಂದೊದಗಿದೆ. ಬೇರೆ ವಿಷಯಗಳಿಗೆ ಸಂಬಂಧಿಸಿ ಇರುವ ಕಾನೂನುಗಳ ಪಾಲನೆಗೆ ಇಚ್ಛಾಶಕ್ತಿ ತೋರಿಸದ ಅಧಿಕಾರಿಗಳು ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ವಾಹನ ಚಾಲಕರ ಮೇಲೆ ವಾತ್ರ ಕಾನೂನಿನ ಸವಾರಿ ಮಾಡುವುದು ಯಾಕೆ? ಉಪ್ಪಿನಂಗಡಿ ಸುತ್ತಮುತ್ತಲಿನ 40 ಕೇಂದ್ರಗಳಲ್ಲಿ ಸ್ವಾತಂತ್ರ ಬಂದು ಇಷ್ಟು ವರ್ಷವಾದರೂ ಸರಕಾರಿ ಸಾರಿಗೆ ವ್ಯವಸ್ಥೆ ಇಲ್ಲ. ಅಲ್ಲಿನವರು ಶಾಲೆಗೆ ಬರಲು ಏನು ಮಾಡಬೇಕು.

ಶಾಲೆಗೆ ಸಮಯ ಪಾಲನೆ ಅತೀ ಮುಖ್ಯವಾಗಿದ್ದು, ಇದಕ್ಕೆ ಹೊಂದಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿದ್ದ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಚಾಲಕರಿಗೆ ಈಗ ಇಲಾಖೆಗಳು ಸಮಸ್ಯೆಯನ್ನು ತಂದೊಡ್ಡಿವೆ. ಆದ್ದರಿಂದ ಇನ್ನು ಮುಂದೆ ವಾಹನ- ಚಾಲಕರ ಮೇಲೆ ಇಲಾಖಾಧಿಕಾರಿಗಳು ದೌರ್ಜನ್ಯವೆಸಗಿದರೆ ಎಲ್ಲರೂ ಒಗ್ಗೂಡಿ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ಪೋಷಕ ಗಣೇಶ್ ಕುಲಾಲ್ ಮಾತನಾಡಿ, ಇಂದಿಗೂ ಎಷ್ಟೋ ಕಡೆ ಸಮರ್ಪಕ ಸಾರಿಗೆ ವ್ಯವಸ್ಥೆಯೇ ಇಲ್ಲದ ಊರುಗಳಿದ್ದು, ಅಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಬರಲು ಇಂತಹ ವಾಹನಗಳನ್ನೇ ಅವಲಂಬಿಸಬೇಕಿದೆ. ಆದರೆ, ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ಇಂತಹ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸುವುದರಿಂದ ವಾಹನ ಚಾಲಕ- ಮಾಲಕರೊಂದಿಗೆ ಬಡ ಮಕ್ಕಳಿಗೆ ತೊಂದರೆಯಾಗುತ್ತದೆ. ಅವರ ಶಿಕ್ಷಣ ಕುಂಠಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಬಿಗು ನಿಯಮಾವಳಿಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದ ಅವರು, ಸರಕಾರ ಕೇವಲ ನಿಯಮಗಳನ್ನು ರೂಪಿಸದೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲು ಬಸ್‌ನ ವ್ಯವಸ್ಥೆಯನ್ನೂ ಮಾಡಲಿ. ಅದರ ಶುಲ್ಕ ನಾವು ಕಟ್ಟುತ್ತೇವೆ ಎಂದರು.

ಸಾಮಾಜಿಕ ಕಾರ್ಯಕರ್ತ ರಾಜ್‌ಗೋಪಾಲ್ ಭಟ್ ಕೈಲಾರ್ ಮಾತನಾಡಿ, ಶಾಲಾ ವಾಹನಗಳಿಗೆ ಬಣ್ಣ ಬಳಿಯುವ ಬದಲು ಬಾವುಟದ ವ್ಯವಸ್ಥೆ ಮಾಡಲಿ. ಶಾಲೆ ಬಿಡುವ ಸಂದರ್ಭ ಉಪ್ಪಿನಂಗಡಿಯಲ್ಲಿ ಸಂಚಾರ ನಿರ್ವಹಣೆಗೆ ಪೊಲೀಸರನ್ನು ನಿಯೋಜಿಸಲಿ ಎಂದರು.

ಪೋಷಕಿ ಶಾಲಿನಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿರುವ ನನ್ನ ಮನೆಯಲ್ಲಿ ಮೂವರು ಶಾಲೆಗೆ ಹೋಗುವ ಮಕ್ಕಳಿದ್ದು, ಅವರಿಗೆ ವಾಹನದ ವ್ಯವಸ್ಥೆಗಾಗಿ ತಿಂಗಳಿಗೆ 1,800 ರೂ. ಖರ್ಚು ಬರುತ್ತಿದೆ. ಆದರೆ, ಈಗ ವಾಹನಗಳಲ್ಲಿ ಮಕ್ಕಳ ಸಂಖ್ಯೆಯನ್ನು ಸೀಮಿತಗೊಳಿಸಿ ಇಲಾಖೆಗಳು ನಿಯಮಾವಳಿ ರೂಪಿಸಿದ್ದು, ಇದರಿಂದಾಗಿ ಮೂವರು ಮಕ್ಕಳಿಗೆ ಶಾಲೆಗೆ ತೆರಳಲು ವಾಹನಕ್ಕಾಗಿ ತನಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಖರ್ಚು ಬರಬಹುದು. ಅದನ್ನು ನನ್ನಲ್ಲಿ ಖಂಡಿತ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಮೊದಲಿನ ಹಾಗೆಯೇ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವ್ಯವಸ್ಥೆ ನಡೆಯಬೇಕು ಎಂದರು.

ಭವಾನಿ, ಐರಿನ್ ಮಾತನಾಡಿ, ನಮ್ಮ ಕಡೆ ಸರಕಾರಿ ಬಸ್ ವ್ಯವಸ್ಥೆ ಇಲ್ಲ. ನಾವೆಲ್ಲಾ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ವಾಹನಗಳನ್ನೇ ನಂಬಬೇಕಿದೆ. ವಾಹನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದರೆ ಮಾತ್ರ ಅಪಘಾತವಾಗುವುದಲ್ಲ. ಅಪಘಾತಕ್ಕೆ ಮುಖ್ಯ ಕಾರಣ ಚಾಲಕರ ಅಜಾಗರೂಕತೆ. ಆದರೆ ಇದೀಗ ಇಲಾಖೆಗಳು ವಾಹನದಲ್ಲಿ ಬರುವ ಮಕ್ಕಳನ್ನು ಸಂಖ್ಯೆಯನ್ನು ಸೀಮಿತಗೊಳಿಸುವುದು ಸರಿಯಲ್ಲ. ಇದರಿಂದ ಪೋಷಕರಿಗೆ ಹೆಚ್ಚಿನ ಹೊರೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮನೆಯವರೆಗೆ ಮಕ್ಕಳನ್ನು ಜವಾಬ್ದಾರಿಯುತವಾಗಿ ಮುಟ್ಟಿಸುವ ವಾಹನಗಳ ಸೇವೆ ಸ್ಥಗಿತಗೊಂಡು ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿನಿಯರು ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅತ್ಯಾಚಾರವಾದರೆ, ಕಾಲುಸಂಕವಿಲ್ಲದ ತೋಡುಗಳನ್ನು ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

 ಜ್ಞಾನ ಭಾರತಿ ವಿದ್ಯಾಲಯದ ಅಝೀಝ್ ನಿನ್ನಿಕಲ್ ಮಾತನಾಡಿ, ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಚಾಲಕರು ಶಾಲೆ ಮತ್ತು ಪೋಷಕರ ಅವಿಭಾಜ್ಯ ಅಂಗಗಳಾಗಿದ್ದಾರೆ. ಇವರ ಈ ಸಂಪರ್ಕ ಸೇತುವಿನಿಂದಾಗಿಯೇ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಕಾಣುವಂತಾಗಿದೆ. ಆದರೆ ಈಗ ಇಲಾಖೆ ರೂಪಿಸಿರುವ ಕಾನೂನನ್ನು ಪಾಲಿಸಿದರೆ, ವಾಹನ ಚಾಲಕ- ಮಾಲಕರೊಂದಿಗೆ ಪೋಷಕರಿಗೂ ಹೆಚ್ಚಿನ ಹೊರೆ ಬೀಳುವಂತಾಗಿದೆ. ಆದ್ದರಿಂದ ಮೊದಲಿನ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ತಿಳಿಸಿದರು.

ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯಗುರು ರವೀಂದ್ರ ದರ್ಬೆ ಮಾತನಾಡಿ, ಪೋಷಕರು ಮಕ್ಕಳನ್ನು ವಾಹನಗಳಲ್ಲಿ ಶಾಲೆಗೆ ಕಳುಹಿಸುವುದು ಆ ವಾಹನ ಚಾಲಕನಲ್ಲಿಟ್ಟಿರುವ ವಿಶ್ವಾಸದಿಂದ. ಆದ್ದರಿಂದ ಕಾನೂನಿನ ಸಡಿಲಿಕೆ ಅಗತ್ಯ. ಇದೆಲ್ಲಾ ಒಂದು ಒಪ್ಪಂದದಲ್ಲಿ ನಡೆದು, ವ್ಯವಸ್ಥಿತ ರೀತಿಯಲ್ಲಿ ಮಕ್ಕಳು ಶಾಲೆಗೆ ಬರುವಂತಾಗಬೇಕು ಎಂದರು.

ಬಳಿಕ ಈಗ ವಿಧಿಸಿರುವ ಕಠಿಣ ನಿಯಮಾವಳಿಗಳನ್ನು ಕೈಬಿಡುವಂತೆ ಒತ್ತಾಯಿಸಿ ಶಾಲಾ ಮಕ್ಕಳ ಪೋಷಕರು ಉಪ್ಪಿನಂಗಡಿ ಉಪತಹಶೀಲ್ದಾರ್ ಕಚೇರಿಯ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಯು.ರಾಮ, ಅರಫಾ ಸಿದ್ದಿಕ್, ಶ್ರೀಕಾಂತ್ ಶೆಟ್ಟಿ, ಸುರೇಶ್ ಮಡಿವಾಳ, ಬಶೀರ್, ಫಾರೂಕ್, ರವೂಫ್, ಮೊದಲಾದವರು ಉಪಸ್ಥಿತರಿದ್ದರು.

ರಾಜ್ ಗೋಪಾಲ ಸ್ವಾಗತಿಸಿದರು. ಕುಶಾಲಪ್ಪ ವಂದಿಸಿದರು. ಮೋಹನ್ ಪಕಳ ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News