×
Ad

ಪಶ್ಚಿಮವಾಹಿನಿ ಯೋಜನೆ ಅನುಷ್ಠಾನದ ಕುರಿತು ಚರ್ಚೆ: ಪ್ರಮೋದ್ ಮಧ್ವರಾಜ್

Update: 2016-07-02 23:47 IST

ಕೋಟ, ಜು.2: ಉಡುಪಿ ಜಿಲ್ಲೆಯ ನೀರಾವರಿಗೆ ಸಂಬಂಧಿಸಿದಂತೆ ಪಶ್ಚಿಮ ವಾಹಿನಿ ಯೋಜನೆ ಅನುಷ್ಠಾನದ ಕುರಿತು ಹಿರಿಯರಾದ ಎ.ಜಿ.ಕೊಡ್ಗಿ ಮನೆಗೆೆ ಅಧಿಕಾರಿಗಳೊಂದಿಗೆ ತೆರಳಿ ಚರ್ಚೆ ನಡೆಸ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಕೋಟತಟ್ಟು ಗ್ರಾಪಂ ಹಾಗೂ ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ವತಿಯಿಂದ ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಶನಿವಾರ ಸಾಂಸ್ಕೃತಿಕ ಬಿಂಬ ಜೋಡೆತ್ತಿನ ಗಾಡಿಯನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.

ಕಲೆ, ಸಂಸ್ಕೃತಿ, ವಿಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಾರಂತರು ಈ ಮಣ್ಣಿನ ಸುಪುತ್ರ. ಸಾಹಿತ್ಯದ ಮೂಲಕ ಉಡುಪಿ ಜಿಲ್ಲೆಗೆ ಭಾರತದ ಭೂಪಟದಲ್ಲಿ ಸ್ಥಾನ ನೀಡಿದ ಸಾಧಕ. ಅವರ ನೆನಪಿನ ಈ ಥೀಂ ಪಾರ್ಕ್ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಅವರು ತಿಳಿಸಿದರು. ಗಾಂಧಿ ಪುತ್ಥಳಿಯನ್ನು ರಾಜ್ಯದ ಮೂರನೆ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ ಅನಾವರಣಗೊಳಿಸಿದರು.

ಕಾರ್ಯ ಕ್ರಮವನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು. ಕೋಟತಟ್ಟು ಗ್ರಾಪಂ ಅಧ್ಯಕ್ಷ ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು.

ನೂತನವಾಗಿ ಆಯ್ಕೆಯಾದ ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಿ., ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಜೋಡೆತ್ತಿನ ಗಾಡಿಯನ್ನು ಮಾದರಿಯಾಗಿ ರಚಿಸಿರುವ ಕೂಸ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕೋಟ ಗ್ರಾಪಂ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ತಾಪಂ ಸದಸ್ಯರಾದ ಜ್ಯೋತಿ ಶ್ರೀನಿವಾಸ್, ಲಲಿತಾ, ಯುಪಿಸಿಎಲ್‌ನ ಅಧಿಕಾರಿ ಕಿಶೋರ್ ಆಳ್ವ, ಕೋಟ ಮಣೂರು ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ ಉಪಸ್ಥಿತರಿದ್ದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿದರು. ಕೋಟತಟ್ಟು ಪಂಚಾಯತ್ ಅಧಿಕಾರಿ ಪಾರ್ವತಿ ವಂದಿಸಿದರು. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News