ಮುನೀರ್ ವಿರುದ್ಧ ದೂರಿಗೆ ಖಂಡನೆ
ಮಂಗಳೂರು, ಜು.2: ಬಾಳಿಗಾ ಕೊಲೆಯ ಆರೋಪಿ ನರೇಶ್ ಶೆಣೈನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಆತನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದು ಜೈಲರ್‌ಗೆ ಸಚಿವ ಖಾದರ್ ಆಪ್ತ ಸಹಾಯಕನ ಹೆಸರಿನಲ್ಲಿ ಕರೆ ಮಾಡಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಸಚಿವರು ಇತ್ತ ಗಮನ ಹರಿಸಿ ಈ ಕುರಿತು ತನಿಖೆ ನಡೆಸಲಿ ಎಂಬ ಪೋಸ್ಟ್ ಹಾಕಿದ್ದಕ್ಕಾಗಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಿರುದ್ಧ ಸಚಿವ ಖಾದರ್, ತನ್ನ ಮೂವರು ಆಪ್ತ ಸಹಾಯಕರ ಮೂಲಕ ಕ್ರಿಮಿನಲ್ ದೂರು ದಾಖಲಿಸಿರುವುದನ್ನು ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಪ್ರಕರಣದ ತನಿಖೆ ನಡೆಸಲು ಸೂಚಿಸಬೇಕಾಗಿದ್ದ ಖಾದರ್, ತನ್ನ ಆಪ್ತ ಸಹಾಯಕರ ಮೂಲಕ ಮುನೀರ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ ಅಧಿಕಾರ ದುರುಪಯೋಗ ಮಾಡಿರುವುದು ಖಂಡನೀಯ ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಪ್ರೊ. ನರೇಂದ್ರ ನಾಯಕ್, ಎಂ. ದೇವದಾಸ್, ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.