×
Ad

ಗುಡ್ಡದಲ್ಲಿ 50 ಅಡಿ ಆಳದ ಬಾವಿ ನಿರ್ಮಿಸಿದ 60ರ ವೃದ್ಧೆ!

Update: 2016-07-03 13:41 IST

ಕುಂದಾಪುರ, ಜು.3: ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಎಲ್ಲರೂ ಜನಪ್ರತಿನಿಧಿಗಳನ್ನು ಬೈಯ್ಯುವುದು, ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಒತ್ತಡ ಹೇರುವುದು ಸಾಮಾನ್ಯ. ಆದರೆ, ಕುಂದಾಪುರದಲ್ಲೊಬ್ಬರು 60ರ ವೃದ್ಧೆ ಗುಡ್ಡದ ತುದಿಯಲ್ಲಿ ಬಾವಿಯನ್ನು ತೋಡಿ ನೀರಿನ ಸಮಸ್ಯೆಗೆ ಮಂಗಳ ಹಾಡಿದ್ದಾರೆ. ಈ ಬಗ್ಗೆ ವಿಜಯಕರ್ನಾಟಕದಲ್ಲಿ ವರದಿಗಾರ ಜಾನ್ ಡಿಸೋಜ ವರದಿ ಮಾಡಿದ್ದಾರೆ.

ಇಲ್ಲಿನ ಅಂಪಾರು ಗ್ರಾಮದ ವಿವೇಕನಗರ ಕಾಲನಿ ನಿವಾಸಿ 60ರ ಹರೆಯದ ಲಕ್ಷ್ಮೀ ಪೂಜಾರ್ತಿ ಎಂಬವರೇ ಗುಡ್ಡದ ತುದಿಯಲ್ಲಿ 50 ಅಡಿ ಆಳದ ಬಾವಿ ತೋಡಿ ನೀರು ದಕ್ಕಿಸಿಕೊಂಡ ಸಾಹಸಿ. ಲಕ್ಷ್ಮೀ ಪೂಜಾರ್ತಿ ಅವರು ಸುಮಾರು 40 ವರ್ಷಗಳ ಹಿಂದೆ ವಿವೇಕನಗರದ ಕಾಲನಿಗೆ ಬಂದು ನೆಲೆಸಿದ್ದರು. ತಮ್ಮ ಮನೆಮಂದಿಯಿಂದ ದೂರವಾದ ಅವರು ಒಬ್ಬಂಟಿಯಾಗಿಯೇ ಮನೆಯಲ್ಲಿ ಜೀವಿಸುತ್ತಿದ್ದರು. ಆದರೆ ಅಲ್ಲಿ ಬೇಸಿಗೆ ಬಂತೆಂದರೆ ಸಾಕು, ಹನಿ ನೀರಿಗೂ ತತ್ವಾರವಿತ್ತು. ಇಂತಹ ಸಂದರ್ಭದಲ್ಲಿ ಇವರ ಪಾಲಿಗೆ ವರವಾದದ್ದು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ.

ಯೋಜನೆಯ ಕೃಷಿ ಕಾರ್ಮಿಕರಾಗಿ ನೋಂದಣಿಯಾಗಿರುವ ಲಕ್ಷ್ಮೀ ಪೂಜಾರ್ತಿಯವರು ವೈಯಕ್ತಿಕ ಕಾಮಗಾರಿಯಡಿ ಬಾವಿ ನಿರ್ಮಿಸುವ ಬೇಡಿಕೆಯನ್ನು ಆಡಳಿತ ವರ್ಗದ ಎದುರು ಇರಿಸಿದ್ದರು. ಆಡಳಿತದಿಂದ ಹಸಿರು ನಿಶಾನೆ ಪಡೆದುಕೊಂಡ ಅವರು, ತನ್ನಲ್ಲಿದ್ದ 40 ಸಾವಿರ ರೂ. ಇಟ್ಟುಕೊಂಡು ಬಾವಿ ತೋಡುವ ಕೆಲಸ ಆರಂಭಿಸಿದರು. ಆಗ ನರೇಗಾ ಯೋಜನೆಯ ಸಹೋದ್ಯೋಗಿ ಕಾರ್ಮಿಕರೂ ಇವರಿಗೆ ಸಾಥ್ ನೀಡಿದರು. ಮಹಿಳಾ ಕಾರ್ಮಿಕರೇ ಸೇರಿಕೊಂಡು ಬಾವಿ ತೋಡುವ ಕೆಲಸ ಮುಂದುವರೆಸಿದರು. ಎಲ್ಲಾ ಕಾರ್ಮಿಕರ ಪ್ರಯತ್ನದ ಫಲವಾಗಿ ಮನೆಯಂಗಳದಲ್ಲಿ 50 ಅಡಿ ಆಳದ, ಹೇರಳ ನೀರು ಇರುವ ಬಾವಿ ನಿರ್ಮಾಣಗೊಂಡಿತು.

ನೀರು ಲಭಿಸಿದುದನ್ನು ಕಂಡು ಪಂಚಾಯತ್ ಆಡಳಿತ ಇನ್ನಷ್ಟು ಪ್ರೋತ್ಸಾಹ ನೀಡಿತು. ಬಾವಿಗೆ ರಿಂಗ್ ಅಳವಡಿಕೆಗಾಗಿ 80 ಸಾವಿರ ರೂ. ಸಹಾಯಧನ ಕೂಡಾ ನೀಡಿತು. ಪಂಚಾಯತ್‌ನ ಸಹಕಾರ ಮತ್ತು ಲಕ್ಷ್ಮೀ ಪೂಜಾರ್ತಿಯವರ ಛಲದ ಫಲವಾಗಿ ಬರ ಪೀಡಿತ ಗುಡ್ಡದಲ್ಲಿ ಹೇರಳವಾಗಿ ನೀರಿರುವ ಬಾವಿಯೊಂದು ನಿರ್ಮಾಣವಾಗಿದೆ. ಇದೀಗ ಬಾವಿಯಲ್ಲಿ ನೀರು ತುಂಬಿದ್ದು, ರಾಟೆಯಿಲ್ಲದೆ, ಕೈಯಿಂದಲೇ ಕೊಡಪಾನದ ಮೂಲಕ ನೀರು ಮೇಲೆತ್ತಬಹುದಾಗಿದೆ.

ನನಗೆ ನನ್ನವರು ಎಂದು ಯಾರೂ ಇಲ್ಲ. ವೃದ್ಧಾಪ್ಯ ವೇತನ 500 ರೂ. ಸಿಗುತ್ತಿದೆ. ನಾನು ಶಾಲೆಯ ಮೆಟ್ಟಿಲು ಹತ್ತಿಲ್ಲ. ಬದುಕಿನ ಅನುಭವಗಳೇ ನನಗೆ ಪಾಠಶಾಲೆ ಎನ್ನುವ ಲಕ್ಷ್ಮೀ ಪೂಜಾರ್ತಿ ಅವರು ಇಳಿವಯಸ್ಸಿನಲ್ಲೂ ಮಾಡಿರುವ ಕೆಲಸ ಎಲ್ಲರಿಗೂ ಮಾದರಿಯಾಗಿದೆ.

ಚಿತ್ರ: ಐಶ್ವರ್ಯ ಬೀಜಾಡಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News