ಉಚ್ಚಿಲ: ಕಪ್ಪೆಚಿಪ್ಪು ಹೆಕ್ಕಲು ಹೋಗಿ ವ್ಯಕ್ತಿ ನೀರುಪಾಲು
ಉಳ್ಳಾಲ, ಜು.3: ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ಉಚ್ಚಿಲದ ಬೆಟ್ಟಂಪಾಡಿ (ಎಂಡ್ ಪಾಯಿಂಟ್) ಸಮುದ್ರ ಕಿನಾರೆಯ ಉಪ್ಪುನೀರಿನ ಹೊಳೆಯಲ್ಲಿ ರವಿವಾರ ಮಧ್ಯಾಹ್ನ ಕಪ್ಪೆಚಿಪ್ಪನ್ನು ಹೆಕ್ಕಲು ಹೋದ ವ್ಯಕ್ತಿಯೋರ್ವರು ನೀರುಪಾಲಾದ ಘಟನೆ ನಡೆದಿದೆ. ಇವರ ಜೊತೆಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಇನ್ನಿಬ್ಬರನ್ನು ಯುವಕನೊರ್ವ ರಕ್ಷಿಸಿದ್ದಾನೆ.
ನೀರುಪಾಲಾದ ವ್ಯಕ್ತಿಯನ್ನು ಕುಂಪಲ ಬಾಲಕೃಷ್ಣ ಮಂದಿರದ ಬಳಿಯ ನಿವಾಸಿ ಅಚ್ಯುತ(43) ಎಂದು ಗುರುತಿಸಲಾಗಿದೆ.
ರವಿವಾರ ಅಚ್ಯುತ್ ತನ್ನ ಸ್ನೇಹಿತರಾದ ಮಾಡೂರಿನ ಸತೀಶ್ ಮತ್ತು ತಲಪಾಡಿಯ ನಾರಾಯಣ ಎಂಬವರೊಂದಿಗೆ ಆಟೊ ರಿಕ್ಷಾದಲ್ಲಿ ಬೆಟ್ಟಂಪಾಡಿ ಕಡಲಕಿನಾರೆಗೆ ಬಂದು ಉಪ್ಪುನೀರಿನ ಹೊಳೆಗಿಳಿದು ಕಪ್ಪೆಚಿಪ್ಪನ್ನು ಹೆಕ್ಕುತ್ತಿದ್ದರೆನ್ನಲಾಗಿದೆ. ಈ ಪ್ರದೇಶದಲ್ಲಿ ಮರಳುಗಾರಿಕೆ ನಡೆಯುತ್ತಿರುವುದರಿಂದ ನಡುವಿನಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿದ್ದು ಇದರ ಅರಿವಿಲ್ಲದ ಅಚ್ಯುತ್ ಮುಂದಕ್ಕೆ ಹೋಗಿದ್ದು ಹೊಳೆಯ ಸುಳಿಗೆ ಸಿಲುಕಿ ನೀರುಪಾಲಾದರು. ಆಗ ಜೊತೆಗಾರರಾದ ಸತೀಶ್ ಮತ್ತು ನಾರಾಯಣ್ ಅವರು ಈಜು ಗೊತ್ತಿಲ್ಲದಿದ್ದರೂ ಅಚ್ಯುತ್ ಅವರನ್ನು ರಕ್ಷಿಸಲು ಮುಂದಾಗಿ ಇಬ್ಬರೂ ಅಪಾಯಕ್ಕೆ ಸಿಲುಕಿದ್ದರು.
ಇಬ್ಬರ ಪ್ರಾಣ ರಕ್ಷಿಸಿದ ಯುವಕ
ಇದೇ ಪ್ರದೇಶಕ್ಕೆ ಕಪ್ಪೆಚಿಪ್ಪು ಹೆಕ್ಕಲು ಪಿಲಾರಿನಿಂದ ಆರು ಜನರ ಇನ್ನೊಂದು ತಂಡವು ಬಂದಿತ್ತು. ಈ ತಂಡದಲ್ಲಿದ್ದ ಕುಂಪಲ ನಿವಾಸಿ ಹರೀಶ್ (36) ಎಂಬವರು ಈಜು ಬಲ್ಲವರಾಗಿದ್ದು ಅಚ್ಯುತ್ ಮತ್ತು ಅವರ ಸ್ನೇಹಿತರು ನೀರು ಪಾಲಾಗುತ್ತಿದ್ದದನ್ನು ಗಮನಿಸಿದ ಅವರು ನೀರಿಗೆ ಧುಮುಕಿ ಸತೀಶ್ ಮತ್ತು ನಾರಾಯಣರ ಪ್ರಾಣ ರಕ್ಷಿಸಿದ್ದಾರೆ. ದಡದಲ್ಲಿದ್ದ ಸ್ಥಳೀಯರಾದ ಹಮೀದ್ ಎಂಬವರು ಕೂಡಲೇ ಸಮಯಕ್ಕೆ ಸರಿಯಾಗಿ ತಮ್ಮ ದೊಣಿಯಲ್ಲಿ ಸತೀಶ್, ನಾರಾಯಣ್ ಮತ್ತು ಅವರ ಪ್ರಾಣ ರಕ್ಷಿಸಿದ ಹರೀಶ್ ಅವರನ್ನು ದಡಕ್ಕೆ ತಲುಪಿದ್ದಾರೆ.
ನೀರುಪಾಲಾದ ಅಚ್ಯುತ್ ಬಡ ಕೂಲಿ ಕಾರ್ಮಿಕರಾಗಿದ್ದು ಪತ್ನಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿ ಅಚ್ಯುತ್ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.