ಹೆದ್ದಾರಿಯುದ್ದಕ್ಕೂ ಪ್ರಾಣಬಲಿಗಾಗಿ ಕಾದಿವೆ ಮರಣಕೂಪಗಳು
ಕಾಸರಗೋಡು, ಜು.3: ಮಳೆಗಾಲ ಬಿರುಸುಗೊಳ್ಳುತ್ತಿದ್ದಂತೆ ಕಾಸರಗೋಡು -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಲವಡೆ ಬೃಹತ್ ಹೊಂಡಗಳು ಬಾಯ್ದೆರೆದುಕೊಂಡಿದೆ. ಕುಂಬಳೆಯಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಡಾಮರು ಎದ್ದು ಹೋಗಿ, ಹೊಂಡಗಳು ನಿರ್ಮಾಣವಾಗಿವೆ.
ಈ ಹೊಂಡಗಳಲ್ಲಿ ಮಳೆನೀರು ತುಂಬಿರುವುದರಿಂದ ಗಮನಕ್ಕೆ ಬಾರದೆ ವಾಹನಗಳು ಅಪಘಾತಕ್ಕೀಡಾಗುತ್ತಿದೆ. ಹೊಂಡ ತಪ್ಪಿಸುವ ಭರದಲ್ಲಿ ಹಲವು ವಾಹನಗಳು ಎದುರಿನಿಂದ ಬರುವ ವಾಹನಗಳಿಗೆ ಢಿಕ್ಕಿ ಹೊಡೆದ ಹಲವು ಘಟನೆಗಳು ನಡೆದಿದೆ. ಅಡ್ಕತ್ತಬೈಲ್, ಕರಂದಕ್ಕಾಡ್ನಲ್ಲಿ ಹಲವು ಹೊಂಡಗಳು ಉಂಟಾಗಿದ್ದು, ಸಂಚಾರ ದುಸ್ತರವಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.
ಮೊಗ್ರಾಲ್ ಪುತ್ತೂರು, ಚೌಕಿ, ಹೊಸ ಬಸ್ಸು ನಿಲ್ದಾಣ ಪರಿಸರ ಮೊದಲಾದೆಡೆ ಹೊಂಡಗಳು ಪ್ರಯಾಣಿಕರ ತಾಳ್ಮೆ ಪರೀಕ್ಷಿಸುತ್ತಿವೆ. ಮಳೆ ಬರುವ ಹಾಗೂ ರಾತ್ರಿ ಸಂದರ್ಭಗಳಲ್ಲಿ ಚಾಲಕರಿಗೆ ಈ ಹೊಂಡಗಳು ಗಮನಕ್ಕೆ ಬರದೆ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬೈಕ್ ಸೇರಿದಂತೆ ಲಘು ವಾಹನಗಳಿಗೆ ಹೊಂಡಗಳು ಹೆಚ್ಚಿನ ಅಪಾಯವನ್ನುಂಟು ಮಾಡುತ್ತಿದೆ. ಬೈಕ್ಗಳು ನಿಯಂತ್ರಣ ತಪ್ಪಿ ಅಪಘಾತಕ್ಕೆ ಸಿಲುಕುತ್ತಿವೆ. ಕಳೆದ ಮಳೆಗಾಲದಲ್ಲಿ ಕುಂಬಳೆಯಿಂದ ತಲಪಾಡಿ ತನಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಈ ಬಾರಿ ಕುಂಬಳೆ ಮೊಗ್ರಾಲ್ನಿಂದ ಕಾಸರಗೋಡು ತನಕ ರಸ್ತೆ ಹದೆಗೆಟ್ಟಿದೆ. ವರ್ಷಂಪ್ರತಿ ಮಳೆಗಾಲದಲ್ಲಿ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗೆ ಕೊನೆ ಇಲ್ಲದಂತಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.