×
Ad

ಮಾದಕ ದ್ರವ್ಯ ವ್ಯಸನಿಗಳ ಕುರಿತು ಸರಕಾರ-ಎಐಐಎಂಎಸ್‌ನಿಂದ ಜನಗಣತಿ

Update: 2016-07-03 20:00 IST

ಹೊಸದಿಲ್ಲಿ, ಜು.3: ಸುಮಾರು 15 ವರ್ಷಗಳ ವಿಳಂಬದ ಬಳಿಕ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಎಐಐಎಂಎಸ್‌ನ ರಾಷ್ಟ್ರೀಯ ಮಾದಕ ವಸ್ತು ಅವಲಂಬಿತರ ಚಿಕಿತ್ಸಾ ಕೇಂದ್ರದ (ಎನ್‌ಡಿಡಿಟಿಸಿ) ಸಹಯೋಗದೊಂದಿಗೆ, ಮಾದಕ ದ್ರವ್ಯ ವ್ಯಸನಿಗಳ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಸಮೀಕ್ಷೆಯೊಂದನ್ನು ನಡೆಸಲಿದೆ.
ಈ ಎರಡು ವರ್ಷಗಳ ಕಾಲದ ಸಮೀಕ್ಷೆಯು ಮಾದಕ ವಸ್ತು ವ್ಯಸನಿಗಳಿಗಾಗಿರುವ ಸೇವೆಗಳು ಮತ್ತು ಮಧ್ಯಪ್ರವೇಶಗಳ ನಕ್ಷೆಯೊಂದನ್ನು ತಯಾರಿಸಲಿದ್ದು, ಸೇವಾ ಪೂರೈಕೆಯಲ್ಲಿನ ಅಂತರವನ್ನು ಗುರುತಿಸಲಿದೆ. 2001ರಲ್ಲಿ ಕೊನೆಯ ಬಾರಿಗೆ ಅಂತಹ ಸಮೀಕ್ಷೆ ನಡೆಸಲಾಗಿದ್ದು, 2004ರಲ್ಲಿ ಅಂಕಿ-ಅಂಶಗಳನ್ನು ಪ್ರಕಟಿಸಲಾಗಿತ್ತು.
ಈ ಯೋಜನೆಗೆ ರೂ. 22.41 ಕೋಟಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.
ಕಳೆದ ಅನೇಕ ವರ್ಷಗಳಿಂದ ಅಂಕಿ-ಅಂಶಗಳು ಲಭಿಸದ ಕಾರಣಕ್ಕಾಗಿ ವಾರ್ಷಿಕ ವಿಶ್ವ ಮಾದಕ ವಸ್ತು ವರದಿಯಲ್ಲಿ ಭಾರದತ ಸ್ಥಾನವನ್ನು ಖಾಲಿಯಾಗಿ ತೋರಿಸಲಾಗಿದೆ.
ಮಾದಕ ದ್ರವ್ಯ ಪಿಡುಗಿಗೆ ಸಂಬಂಧಿಸಿದ ಅನೇಕ ಅಂತಾರಾಷ್ಟ್ರೀಯ ಸನದುಗಳಿಗೆ ಭಾರತ ಸಹಿ ಹಾಕಿರುವುದರಿಂದ ಅದು ವಿಶ್ವ ಸಂಸ್ಥೆಯ ಮಾದಕ ವಸ್ತು ಮತ್ತು ಅಪರಾಧ ಕಚೇರಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ, ಭಾರತದಲ್ಲಿ ಬಳಕೆಯಾಗುತ್ತಿರುವ ಮಾದಕ ದ್ರವ್ಯಗಳ ಪ್ರಮಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ವರದಿಯನ್ನು ನೀಡಬೇಕೆಂದು ನಿರೀಕ್ಷಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಭಾರತವು 15 ವರ್ಷ ಹಳೆಯ ಅಂಕಿ-ಅಂಶಗಳನ್ನೇ ಅವಲಂಬಿಸಬೇಕಾಗಿದೆಯೆಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News