×
Ad

ಹೈನುಗಾರರ ಮಕ್ಕಳಿಗೆ ಉಚಿತ ಪಶುವೈದ್ಯಕೀಯ ವಿಜ್ಞಾನ ಶಿಕ್ಷಣ

Update: 2016-07-03 23:56 IST

ಮಂಗಳೂರು, ಜು.3: ದ.ಕ. ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರ ಮಕ್ಕಳು ಪಶು ವೈದ್ಯಕೀಯ ವಿಜ್ಞಾನ ಶಿಕ್ಷಣ ಪಡೆಯುವುದಾದಲ್ಲಿ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಉಚಿತವಾಗಿ ವ್ಯಾಸಂಗ ಶುಲ್ಕ ಹಾಗೂ ವಸತಿ ಶುಲ್ಕವನ್ನು ನೀಡುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ವ್ಯಾಸಂಗ ಮಾಡುತ್ತಿರುವವರು ಕೂಡ ಫಲಾನುಭವಿಗಳಾಗಬಹುದಾಗಿದೆ. ಪಶು ವೈದ್ಯಕೀಯ ವಿಜ್ಞಾನದಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವ ಹೈನುಗಾರರ ಮಕ್ಕಳಿಗೆ ವ್ಯಾಸಂಗ ಶುಲ್ಕ ಹಾಗೂ ವಸತಿ ಶುಲ್ಕವನ್ನು ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನೀಡಲಾಗುವುದು. ಇದು ಹಾಲು ಉತ್ಪಾದಕರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಸ್ಫೂರ್ತಿ ಹಾಗೂ ಉತ್ತೇಜನವಾಗುವುದು. ವ್ಯಾಸಂಗದ ನಂತರ ಕನಿಷ್ಠ 5 ವರ್ಷಗಳ ಕಾಲ ಕಡ್ಡಾಯವಾಗಿ ಒಕ್ಕೂಟದ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲು ಬದ್ಧರಾಗಿದ್ದು, ಈ ಬಗ್ಗೆ ರೈತ ಕಲ್ಯಾಣ ಟ್ರಸ್ಟ್‌ನಿಂದ ಒಪ್ಪಂದ ಮಾಡಿಕೊಳ್ಳಬೇಕು.
ಈಗಾಗಲೇ ಪಶುವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡ ಎರಡು, ಮೂರು ಹಾಗೂ ನಾಲ್ಕನೆ ವರ್ಷದ ವಿದ್ಯಾರ್ಥಿಗಳಿಗೂ, ಇನ್ನುಳಿದ ಅವಧಿಗೆ ಅಗತ್ಯವಿರುವ ಶುಲ್ಕ ಪಾವತಿಸಲಾಗುವುದು. ಸಹಾಯಧನ ಪಡೆದಷ್ಟು ವರ್ಷ ವಿದ್ಯಾರ್ಥಿಗಳು ಒಕ್ಕೂಟದಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸಬೇಕು.
   ಪಶುವೈದ್ಯಕೀಯ ವಿಜ್ಞಾನದಲ್ಲಿ ಸೀಟು ಪಡೆದುಕೊಂಡ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರ ಮಕ್ಕಳು ಈ ಸದುಪಯೋಗ ಪಡೆದುಕೊಳ್ಳುವಂತೆ ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News