ಎಫ್‌ಬಿಐ ಅಧಿಕಾರಿಗಳಿಂದ ಹಿಲರಿ 'ವಿಚಾರಣೆ'
ವಾಶಿಂಗ್ಟನ್,ಜು.3: ಒಬಾಮ ಆಡಳಿತದಲ್ಲಿ ವಿದೇಶಾಂಗ ಸಚಿವೆಯಾಗಿದ್ದಾಗ ಸಚಿವಾಲಯದ ವ್ಯವಹಾರಗಳಿಗೆ ತನ್ನ ಖಾಸಗಿ ಇಮೇಲ್ ಖಾತೆಯನ್ನೇ ಬಳಸಿಕೊಂಡಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಶನಿವಾರ ಸುಮಾರು ಮೂರೂವರೆ ತಾಸುಗಳ ಕಾಲ ಪ್ರಶ್ನಿಸಿದೆ. ಹಿಲರಿ ಕ್ಲಿಂಟನ್ ವಿದೇಶಾಂಗ ಸಚಿವೆಯಾಗಿದ್ದಾಗ ತನ್ನ ಇಮೇಲ್ ವ್ಯವಸ್ಥೆಗಳ ಕುರಿತಾಗಿ ಹಿಲರಿ ಕ್ಲಿಂಟನ್ ಅವರು ಎಫ್‌ಬಿಐ ಅಧಿಕಾರಿಗಳ ಮುಂದೆ ಶನಿವಾರ ಬೆಳಗ್ಗೆ ಸ್ವಯಂಪ್ರೇರಿತ ಹೇಳಿಕೆಯನ್ನು ನೀಡಿದ್ದಾರೆಂದು ಅವರ ಚುನಾವಣಾ ವಕ್ತಾರ ನಿಕ್ ಮೆರಿಲ್ ತಿಳಿಸಿದ್ದಾರೆ. ವಾಶಿಂಗ್ಟನ್‌ನಲ್ಲಿರುವ ಎಫ್‌ಬಿಐನ ಮುಖ್ಯ ಕಾರ್ಯಾಲಯದಲ್ಲಿ ಹಿಲಿಯವರ 'ಸಂದರ್ಶನ' ನಡೆಯಿತೆಂದು ಅವರು ತಿಳಿಸಿದ್ದಾರೆ.
ತನಿಖಾ ಪ್ರಕ್ರಿಯೆಗೆ ಗೌರವ ನೀಡುವ ಉದ್ದೇಶದಿಂದ ಹಿಲರಿ ಇನ್ನು ಮುಂದೆ,ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲವೆಂದು ಮೆರಿಲ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಮೊದಲ ಅವಧಿಯ ಸರಕಾರದಲ್ಲಿ ಹಿಲರಿ ವಿದೇಶಾಂಗ ಸಚಿವೆಯಾಗಿದ್ದರು.