ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿದ ಚಿರತೆ!
ಮುಲ್ಕಿ, ಜು.3: ಕಿನ್ನಿಗೋಳಿ ಸಮೀಪದ ಶುಂಠಿಪಾಡಿ ಎಂಬಲ್ಲಿ ಪ್ರತ್ಯಕ್ಷಗೊಂಡ ಚಿರತೆಯೊಂದು ವ್ಯಕ್ತಿಯೊಬ್ಬನನ್ನು ಅಟ್ಟಿಸಿಕೊಂಡು ಬಂದ ಘಟನೆ ರವಿವಾರ ಸಂಜೆ 5 ಗಂಟೆಯ ಸುಮಾರಿಗೆ ನಡೆದಿದೆ.
ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶುಂಠಿಪಾಡಿ ನಿವಾಸಿ ನವೀನ್ ಡಿಸೋಜ ಎಂಬವರು ಚಿರತೆಯಿಂದ ಪಾರಾದವರು. ಕೆಲಸ ಮುಗಿಸಿಕೊಂಡು ಎಂದಿನಂತೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಪೊದೆಯೊಂದರಿಂದ ಏಕಾಏಕಿ ಎದುರಾದ ಚಿರತೆ ಅಟ್ಟಿಸಿಕೊಂಡು ಬಂದಿತ್ತು ಎಂದು ನವೀನ್ ಡಿಸೋಜ ಮಾಹಿತಿ ನೀಡಿದ್ದಾರೆ.
ಚಿರತೆ ಪ್ರತ್ಯಕ್ಷಗೊಂಡ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಕೃಷಿಕರು ಗಾಬರಿಗೊಂಡಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ನಾಳೆಯಿಂದ ತೊಡಗಿಸಿಕೊಳ್ಳುವುದು ಹೇಗೆ ಎಂದು ಅವರು ಚಿಂತಿತರಾಗಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಶುಂಠಿಪಾಡಿಯಲ್ಲಿ ಕಾಡುಹಂದಿಗಳಿಗೆಂದು ಇಡಲಾಗಿದ್ದ ಉರುಳಿಗೆ ಆಹಾರ ಅರಸಿ ಬಂದಿದ್ದ ಗಂಡು ಚಿರತೆಯೊಂದು ಸಿಕ್ಕಿಬಿದ್ದಿತ್ತು ಇದೀಗ ಕಳೆದ ಹಲವು ದಿನಗಳಿಂದಲೂ ಈ ಪ್ರದೇಶದಲ್ಲಿ ಚಿರತೆ ಓಡಾಟದ ಕುರುಹುಗಳು ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.