×
Ad

ಉಡುಪಿ: ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆ

Update: 2016-07-04 00:13 IST

ಉಡುಪಿ, ಜು.3: ರಾಜಕಾರಣಿಗಳು, ಅಧಿಕಾರಿ ಗಳು ಹಾಗೂ ಸಾರ್ವಜನಿಕರಿಗೆ ಇಚ್ಛಾಶಕ್ತಿ ಇದ್ದರೆ ಮರಗಳ ಸಂರಕ್ಷಣೆ ಸಾಧ್ಯ ಎಂದು ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆ, ಕುಂದಾಪುರ ವಿಭಾಗದ ವತಿಯಿಂದ ರವಿವಾರ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾಗಿದ್ದ ಕೋಟಿ ವೃಕ್ಷ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶೇ.80ರಷ್ಟು ಅರಣ್ಯ ಹೊಂದಿರುವ ಭೂತಾನ್ ದೇಶದಲ್ಲಿ ಮರಗಳನ್ನು ಕಡಿಯಲು ಅವಕಾಶವೇ ಇಲ್ಲ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಅರಣ್ಯ ಅಭಿವೃದ್ಧಿಯಾಗಬೇಕು ಎಂದು ಸಚಿವರು ತಿಳಿಸಿದರು.
ಪರಿಸರ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸಿದ ಅಜಯ್ ಗಿರಿ(ಕಾಳಿಂಗ ಸರ್ಪ ಸಂರಕ್ಷಣೆ), ಕೆ.ಪಿ.ಶೆಟ್ಟಿ(ನಿಸರ್ಗಧಾಮಗಳ ಅಭಿವೃದ್ಧಿ), ಆರೂರು ಮಂಜುನಾಥ ರಾವ್(ಔಷಧೀಯ ಸಸ್ಯಗಳ ಬೆಳವಣಿಗೆ ಮತ್ತು ಸಂರಕ್ಷಣೆ), ಸಮ್ಮಿಲನ ಶೆಟ್ಟಿ(ಚಿಟ್ಟೆಗಳ ಅಧ್ಯಯನ ಮತ್ತು ಪಾರ್ಕ್ ಸ್ಥಾಪನೆ), ಕೃಷ್ಣಮೂರ್ತಿ ಹೆಬ್ಬಾರ್ (ಹಾವುಗಳ ಸಂರಕ್ಷಣೆ)ರನ್ನು ಸನ್ಮಾನಿಸ ಲಾಯಿತು.
ಉತ್ತಮ ಸೇವೆ ಸಲ್ಲಿಸಿದ ವಲಯ ಅರಣ್ಯಾಧಿಕಾರಿ ದಿನೇಶ್( ಮೂಡುಬಿದಿರೆ ವಲಯ), ರಮೇಶ್(ಉಡುಪಿ), ಬ್ರಿಜೇಶ್(ಶಂಕರನಾರಾಯಣ) ಹಾಗೂ ಸಿಬ್ಬಂದಿ ಮಂಜು ಗಾಣಿಗ, ಸೂರ್ಯನಾರಾಯಣ ಮತ್ತು ದೇವರಾಜ ಪಾಣರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಐವರು ರೈತರಿಗೆ ಕೃಷಿ ಪ್ರೋತ್ಸಾಹ ಧನ ವಿತರಿಸಲಾಯಿತು.
 ನಗರಸಭೆಯ ಅಧ್ಯಕ್ಷ ಮೀನಾಕ್ಷಿ ಮಾಧವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ವೆರೋನಿಕ ಕರ್ನೇಲಿಯೊ, ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತುರಾಜು, ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಮೆಂಡನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ ಉಪಸ್ಥಿತರಿದ್ದರು.
ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಅಮರನಾಥ ಸ್ವಾಗ ತಿಸಿದರು. ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ.ಭಟ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಪ್ರತಿ ದಿನ ಒಬ್ಬ ಮಾನವನಿಗೆ ಸುಮಾರು 3 ಸಿಲಿಂಡರ್‌ನಷ್ಟು ಆಮ್ಲಜನಕದ ಅಗತ್ಯ ವಿದೆ. ಒಬ್ಬ ವ್ಯಕ್ತಿ ಸುಮಾರು 65 ವರ್ಷ ಬದುಕಿದರೆ ಅವನಿಗೆ ಸುಮಾರು 5 ಕೋ.ರೂ. ಮೊತ್ತದ ಆಮ್ಲಜನಕ ನಿಸರ್ಗದಿಂದ ಉಚಿತವಾಗಿ ದೊರೆಯುತ್ತದೆ. ಮಳೆ ನೀರನ್ನು ಹಿಡಿದು, ಇಂಗಿಸುವ ಶಕ್ತಿ ಕೇವಲ ಅರಣ್ಯಗಳಿಗೆ ಮಾತ್ರ ಇದೆ. ಆದ್ದ ರಿಂದ ಅರಣ್ಯ ಸಂರಕ್ಷಣೆಗೆ ಎಷ್ಟು ಮಹತ್ವ ಕಲ್ಪಿಸಿದರೂ ಸಾಲದು.
-ಡಾ.ಸಂಜಯ್ ಬಿಜೂರು, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News