ಬೈಂದೂರು-ಕಣ್ಣೂರು ರೈಲು ಸ್ಥಗಿತಕ್ಕೆ ಸಿದ್ಧತೆ?
ಕಾಸರಗೋಡು, ಜು.3: ಬಹುನಿರೀಕ್ಷಿತ ಬೈಂದೂರು-ಕಣ್ಣೂರು ರೈಲುಸ್ಥಗಿತಕ್ಕೆ ಹುನ್ನಾರ ನಡೆಯುತ್ತಿದ್ದು, ನಷ್ಟದ ನೆಪವೊಡ್ಡಿ ರೈಲು ಸಂಚಾರ ನಿಲುಗಡೆಗೊಳಿಸುವ ನಿಟ್ಟಿನಲ್ಲಿ ಲಾಬಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸುವವರು ಸೇರಿದಂತೆ ಸಾವಿರಾರು ಜನರು ಅವಲಂಬಿಸಿ ರುವ ಈ ರೈಲಿನ ಸಂಚಾರ ಸ್ಥಗಿತಗೊಂಡಲ್ಲಿ ಸಾಕಷ್ಟು ಸಮಸ್ಯೆಗಳು ತಲೆದೋರಲಿದೆ.
ಕೇರಳದಿಂದ ನೂರಾರು ಮಂದಿ ಕೊಲ್ಲೂರು ದೇವಸ್ಥಾನ ಸೇರಿದಂತೆ ಹಲವು ಪುಣ್ಯಕ್ಷೇತ್ರ ಮತ್ತು ಪ್ರವಾಸಿ ತಾಣಗಳಿಗೆ ತೆರಳಲು ಈ ರೈಲನ್ನು ಬಳಸುತ್ತಿದ್ದಾರೆ. 2015ರ ಫೆಬ್ರವರಿ 15 ರಂದು ಈ ರೈಲಿಗೆ ಚಾಲನೆ ನೀಡಲಾಗಿತ್ತು. ಆ ಬಳಿಕ ರೈಲುಸಂಚಾರವನ್ನು ಕಣ್ಣೂರಿಗೆ ವಿಸ್ತರಿಸಲಾಗಿತ್ತು. ಆದರೆ ರೈಲನ್ನು ಗುರುವಾಯೂರು ತನಕ ಓಡಿಸಬೇಕೇಂಬ ಒತ್ತಾಯವೂ ಈ ಸಂದರ್ಭ ಕೇಳಿಬಂದಿದ್ದು, ಈ ಬಗ್ಗೆ ಭರವಸೆಯೂ ಲಭಿಸಿತ್ತು. ಆದರೆ ಕಣ್ಣೂರಿನಿಂದ ಬೈಂದೂರು ತನಕ ಸಂಚರಿಸುವ ಪ್ರಯಾಣಿಕರ ಕೊರತೆಯಿದೆ ಎಂಬ ನೆಪವೊಡ್ಡಿ ರೈಲುಸಂಚಾರ ಸ್ಥಗಿತಗೊಳಿಸುವ ಸಿದ್ಧತೆಗಳು ನಡೆಯುತ್ತಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಈ ಹಿಂದೆ ಕೇರಳದಿಂದ ಬಸ್‌ಗಳ ಮೂಲಕ ಕೊಲ್ಲೂರಿಗೆ ಯಾತ್ರಾರ್ಥಿಗಳು ತೆರಳುತ್ತಿದ್ದು, ರೈಲುಸಂಚಾರ ಆರಂಭಿಸಿದ ಬಳಿಕ ಬಹುತೇಕರು ರೈಲನ್ನು ಅವಲಂಬಿಸಿದ್ದಾರೆ. ಆದರೆ ಸಮಯದಲ್ಲಿನ ಸಮಸ್ಯೆಯು ಯಾತ್ರಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎ
ನ್ನಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ಸಮಯದಲ್ಲಿ ರೈಲು ಸಂಚರಿಸಿದಲ್ಲಿ ಪ್ರಯಾಣಿಕರ ಸಂಖ್ಯೆ ಕೂಡಾ ಹೆಚ್ಚಲಿದೆ. ಕಣ್ಣೂರಿನಿಂದ ಬೆಳಗ್ಗೆ 4:15ಕ್ಕೆ ಹೊರಡುವ ರೈಲು 11:50ಕ್ಕೆ ಬೈಂದೂರು ತಲುಪುತ್ತಿದೆ. ಮಧ್ಯಾಹ್ನ 1 ಗಂಟೆಗೆ ಬೈಂದೂರಿನಿಂದ ಪ್ರಯಾಣ ಬೆಳೆಸುವ ರೈಲು ರಾತ್ರಿ ಒಂಬತ್ತು ಗಂಟೆಗೆ ಕಣ್ಣೂರಿಗೆ ತಲಪುತ್ತಿದೆ. ಆದರೆ ಮುಂಜಾನೆ ನಾಲ್ಕು ಗಂಟೆಗೆ ನಿಲ್ದಾಣಕ್ಕೆ ತಲುಪಲು ಪ್ರಯಾಣಿಕರಿಗೆ ಸಾಧ್ಯವಾಗುತ್ತಿಲ್ಲ. ಬಾಡಿಗೆಗೆ ವಾಹನಗಳಲ್ಲಿ ರೈಲು ನಿಲ್ದಾಣಕ್ಕೆ ತಲುಪಬೇಕಾದ ಸ್ಥಿತಿ ಉಂಟಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಬೆಳಗ್ಗೆ 6:30ರ ಬಳಿಕ ರೈಲು ಸಂಚರಿಸುತ್ತಿದ್ದಲ್ಲಿ ಪ್ರಯಾಣಿ ಕರಿಗೆ ಪ್ರಯೋಜನವಾಗಲಿದೆ. ಸಮಯ ಬದಲಾವಣೆ ಮಾಡ ಬೇಕೆಂಬ ಒತ್ತಾಯ ಕೂಡಾ ಪ್ರಯಾಣಿಕರಿಂದ ಕೇಳಿಬರುತ್ತಿದೆ.
ಯಾತ್ರಾಸ್ಥಳ ಕೇಂದ್ರೀಕರಿಸಿ ರೈಲನ್ನು ಓಡಿಸಲಾಗುವುದು ಎಂದು ಈ ಹಿಂದೆ ಕೇಂದ್ರ ಸಚಿವರು ಭರವಸೆ ನೀಡಿ ದ್ದರೂ ಆ ಭರವಸೆ ಇನ್ನೂ ಈಡೇರಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಬೈಂದೂರು-ಕಣ್ಣೂರು ರೈಲು ಸಂಚಾರವನ್ನು ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.