300 ಕೋ.ರೂ. ವೆಚ್ಚದ ಕುಡ್ಸೆಂಪ್ ಯೋಜನೆಗೆ ಮಂಜೂರಾತಿ: ಸಚಿವ ಪ್ರಮೋದ್
ಉಡುಪಿ, ಜು.3: ಉಡುಪಿ ನಗರದ ಕುಡಿ ಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗೆ 300 ಕೋಟಿ ರೂ. ವೆಚ್ಚದ ಕುಡ್ಸೆಂಪ್ ಯೋಜನೆಗೆ ಆದಷ್ಟು ಬೇಗ ಮಂಜೂರಾತಿ ದೊರಕಿಸಿಕೊಡಲಾಗುವುದು ಎಂದು ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ನಗರಸಭೆಯಿಂದ ರವಿವಾರ ಅಜ್ಜರಕಾಡು ಪುರಭವನದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಜನರ ನಿರೀಕ್ಷೆಯಂತೆ ಕೆಲಸ ನಿರ್ವಹಿಸುತ್ತೇನೆ. ಈ ಮೂಲಕ ಉಡುಪಿಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿ ಸುತ್ತೇನೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯ ಅಮೃತ್ ಶೆಣೈ, ನಗರಸಭೆ ವಿಪಕ್ಷ ನಾಯಕ ಡಾ.ಎಂ.ಆರ್.ಪೈ ಅಭಿನಂದನಾ ಭಾಷಣ ಮಾಡಿದರು. ಅತಿಥಿಗಳಾಗಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ನಗರಸಭೆ ಮಾಜಿ ಅಧ್ಯಕ್ಷೆ ಲೀನಾ ಐಸಾಕ್ ಕ್ರಿಸ್ಟಿನ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ನಗರಸಭಾ ಸದಸ್ಯ ದಿನಕರ ಶೆಟ್ಟಿ ಹೆರ್ಗ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಪುತ್ರನ್ ಉಪಸ್ಥಿತರಿದ್ದರು.
ಪೌರಾಯುಕ್ತ ಡಿ.ಮಂಜುನಾಥಯ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಾರ್ದನ ಭಂಡಾರ್ಕರ್ ಸನ್ಮಾನಪತ್ರ ವಾಚಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಭಟ್ ವಂದಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.