ಆಲಂಗಾರು ಲಯನ್ಸ್ ಕ್ಲಬ್ ಪದಗ್ರಹಣ
ಮೂಡುಬಿದಿರೆ, ಜು.4 : ಆಲಂಗಾರು ಲಯನ್ಸ್ ಕ್ಲಬ್ ನ 2016-17ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಕಲಚೇತನ ಕಾಕು ಎಂಬವರಿಗೆ ವೀಲ್ ಚೇರ್ ನೀಡುವ ಮೂಲಕ ಸೇವಾ ಕಾರ್ಯಗಳಿಗೆ ಚಾಲನೆ ಭಾನುವಾರ ಸಂಜೆ ಆಲಂಗಾರು ಚರ್ಚ್ ಹಾಲ್ ನಲ್ಲಿ ನಡೆಯಿತು.
ಜಿಲ್ಲೆ 317ಡಿ ಇದರ 2016-17ನೇ ಸಾಲಿನ ಜಿಲ್ಲಾ ಗವರ್ನರ್ ಲಯನ್ ಕವಿತಾ.ಎಸ್.ಶಾಸ್ತ್ರಿ ಎಂಜೆಎಫ್ ಅವರು ಪದಗ್ರಹಣವನ್ನು ನೆರವೇರಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ ಸೇವೆ ಎಂಬುದು ಲಯನ್ಸ್ ಸಂಸ್ಥೆಯ ಉದ್ದೇಶವಾಗಿದೆ. ನಮ್ಮಲ್ಲಿರುವ ಸ್ವಲ್ಪ ಹಣವನ್ನು ಇತರರ ಸೇವೆಗಳಿಗೆ ವಿನಿಯೋಗಿಸುವ ಅವಕಾಶವಿದ್ದಾಗ ಅದರ ಪ್ರಯೋಜನವನ್ನು ಪಡೆದುಕೊಂಡು ಸಾರ್ಥಕತೆಯನ್ನು ಕಾಣಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ನಾವು ಯಾವುದೇ ಕೆಲಸಗಳನ್ನು ಮಾಡುವ ಮೊದಲು ಯೋಜನೆಯನ್ನು ಹಾಕಿಕೊಂಡಾಗ ಅದರಲ್ಲಿ ಉತ್ತಮ ಫಲಿತಾಂಶವನ್ನು ಕಾಣಲು ಸಾಧ್ಯ ಎಂದು ಹೇಳಿದ ಅವರು ಅಲಂಗಾರು ಲಯನ್ಸ್ ಕ್ಲಬ್ ಕಳೆದ ಮೂರು ವರ್ಷಗಳಿಂದ ಉತ್ತಮ ಸೇವೆಗಳನ್ನು ಸಮಾಜಕ್ಕೆ ನೀಡಿದೆ ಎಂದು ಶ್ಲಾಘಿಸಿದರು.
ನೂತನ ಅಧ್ಯಕ್ಷೆ ರೂಪಾ ನಾಯಕ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅಧ್ಯಕ್ಷೆಯಾಗಿ ಉತ್ತಮ ಕೆಲಸಗಳನ್ನು ಮಾಡುತ್ತೇನೆ ಆದರೆ ತನಗೆ ನಿರ್ಗಮನ ಅಧ್ಯಕ್ಷರ ಹಾಗೂ ಇತರ ಪದಾಧಿಕಾರಿಗಳ ಸಹಕಾರ ಅಗತ್ಯವೆಂದು ಹೇಳಿದರು.
ನಿರ್ಗಮನ ಅಧ್ಯಕ್ಷ ಹರ್ಮನ್ ರೊಡ್ರಿಗಸ್ ಅವರು ಅಲಂಗಾರು ಸೈಂಟ್ ತೋಮಸ್ ಶಾಲೆಗೆ ಪೀಠೋಪಕರಣಗಳನ್ನು ಒದಗಿಸಿಲು ಸಹಾಯಧನ ರೂ 5,000ದ ಚೆಕ್ಕನ್ನು ಹಸ್ತಾಂತರಿಸಿ, ಮಾತನಾಡಿ ತಮ್ಮ ಸಮಸ್ಯೆಗಳ ಮಧ್ಯೆ ಇತರರ ತೊಂದರೆಗಳನ್ನು ಅರಿಯಲು ಈ ಸಂಸ್ಥೆಯಿಂದ ತನಗೆ ಸಹಕಾರಿಯಾಗಿದೆ ಹಾಗೂ ಸೇವೆ ಸಂತಸವನ್ನು ನೀಡಿದೆ ಎಂದರು.
ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿರುವ ಅಲಂಗಾರು ಪ್ರೌಢಶಾಲೆಯ ಅನುಷ್ಕಾ ಪಿರೇರಾ, ಗ್ಲ್ಯೇನಿಶ್ ಮಾರ್ಟಿಸ್ ಹಾಗೂ ಅಕ್ಷಯ್ ಕುಮಾರ್ ಅವರನ್ನು ಗೌರವಿಸಲಾಯಿತು.
ಸೇರ್ಪಡೆ: ವಿನೋದ್ ನಝ್ರತ್ ಅವರನ್ನು ನೂತನ ಸದಸ್ಯನಾಗಿ ಕ್ಲಬ್ಗೆ ಸೇರ್ಪಡೆಗೊಳಿಸಲಾಯಿತು. ಆಲಂಗಾರು ಚರ್ಚಿನ ಧರ್ಮಗುರು, ಕ್ಲಬ್ ನ ಸ್ಥಾಪಕಾಧ್ಯಕ್ಷ ರೆ.ಫಾ. ಬೇಸಿಲ್ವಾಸ್, ಪ್ರಾಂತೀಯ ಅಧ್ಯಕ್ಷ ಲ/ಪ್ರಮಥ್ ಕುಮಾರ್, ಆ್ಯಂಡ್ರೂ ಡಿ'ಸೋಜ, ಪ್ರವೀಣ್ ಕುಮಾರ್ ಇಂದ್ರ, ಗಿರಿಧರ್ ನಾಯಕ್, ಲಯನ್ ಬಿ.ಸಿ ರಮೇಶ್, ತೋಡಾರು ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಶೆಟ್ಟಿ, ಶಿರ್ತಾಡಿ ಕ್ಲಬ್ ಅಧ್ಯಕ್ಷ ನಾರಾಯಣ ಸಾಲ್ಯನ್, ಮೂಡುಬಿದಿರೆ ಲಯನ್ಸ್ ಅಧ್ಯಕ್ಷ ರುಕ್ಕಯ ಪೂಜಾರಿ, ವೇಣೂರು ಕ್ಲಬ್ ಅಧ್ಯಕ್ಷ ಗಿರೀಶ್, ಆಶಾ ರಾವ್ ಅತಿಥಿಗಳಾಗಿ ಭಾಗವಹಿಸಿದ್ದರು.
ನಿರ್ಗಮನ ಅಧ್ಯಕ್ಷ ಹರ್ಮನ್ ರೊಡ್ರಿಗಸ್ ಸ್ವಾಗತಿಸಿದರು. ಲ/ ಹೆರಾಲ್ಡ್ ತೌಪ್ರೋ ನೂತನ ಅಧ್ಯಕ್ಷರನ್ನು ಪರಿಚಯಿಸಿದರು. ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ ಅವರನ್ನು ಅಪೂರ್ವ ಪರಿಚಯಿಸಿದರು. ಲ/ ಲಕ್ಷ್ಮಣ್ ನಾಯಕ್ ವರದಿ ಮಂಡಿಸಿದರು. ಮನೋಹರ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಸುಜಾತ ರಮೇಶ್ ವಂದಿಸಿದರು.