×
Ad

ಉತ್ತರ ಪ್ರದೇಶ : ಸುಶ್ಮಾ ಬಿಜೆಪಿಯ ಅಚ್ಚರಿಯ ಸಿಎಂ ಅಭ್ಯರ್ಥಿ ?

Update: 2016-07-04 16:57 IST

ಹೊಸದಿಲ್ಲಿ, ಜು. 4: ಮುಂದಿನ ವರ್ಷದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಈವರೆಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೆ ಲೆಕ್ಕಾಚಾರದಲ್ಲಿ ತೊಡಗಿರುವ ಬಿಜೆಪಿ ಕೊನೆಗೆ ತನ್ನ ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯಗಳಲ್ಲಿ ವದಂತಿ ಹರಡಿದೆ. ಈ ಅಚ್ಚರಿಯ ಅಭ್ಯರ್ಥಿ ಬೇರೆ ಯಾರೂ ಅಲ್ಲ, ಪಕ್ಷದ ಅತ್ಯಂತ ಹಿರಿಯ ಮಹಿಳಾ ನಾಯಕಿ, ಬಿಜೆಪಿಯಲ್ಲಿ ಎಲ್ಲರ ಸಮಾನ ಗೌರವಕ್ಕೆ ಪಾತ್ರವಾಗಿರುವ ಹಾಲಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ! 

ಉತ್ತರ ಪ್ರದೇಶ ಮೋದಿ ಹಾಗೂ ಅಮಿತ್ ಶಾ ಪಾಲಿಗೆ ಅತ್ಯಂತ ಮಹತ್ವದ ರಾಜ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ 72 ಸ್ಥಾನಗಳನ್ನು ಗೆದ್ದ ದೇಶದ ಬಹುದೊಡ್ಡ ರಾಜ್ಯದಲ್ಲಿ ಸರಕಾರ ರಚಿಸುವುದು ಬಿಜೆಪಿಯ ಈ ನಂಬರ್ ಒನ್ ಜೋಡಿಯ ಪಾಲಿಗೆ ಎಲ್ಲಕ್ಕಿಂತ ಮುಖ್ಯವಾಗಿದೆ. ರಾಜ್ಯದಲ್ಲಿ ಎಸ್ಪಿ  ಹಾಗೂ ಬಿಎಸ್ಪಿ ಯಂತಹ ಪ್ರಬಲ ಪಕ್ಷಗಳ ಸವಾಲಿದೆ. ಜೊತೆಗೆ ನೆಲಕಚ್ಚಿರುವ ಕಾಂಗ್ರೆಸ್ ಪ್ರಶಾಂತ್ ಕಿಶೋರ್ ಮೂಲಕ ಅಚ್ಚರಿಯ ರಣತಂತ್ರ ರೂಪಿಸುವಲ್ಲಿ ನಿರತವಾಗಿದೆ. ಅದರ ಭಾಗವಾಗಿ ಪ್ರಿಯಾಂಕಾ ಗಾಂಧಿಯನ್ನು ಪ್ರಚಾರಕ್ಕೆ ಇಳಿಸುವುದು ಬಹುತೇಕ ಖಚಿತವಾಗಿದೆ. ಹಾಗಾಗಿ ಬಿಜೆಪಿ ಎಲ್ಲರಿಗೂ ಸ್ವೀಕಾರಾರ್ಹ ಹಾಗೂ ಜನಪ್ರಿಯ ಮಹಿಳಾ ಮುಖವನ್ನೇ ಕಣಕ್ಕಿಳಿಸಿ ಉಳಿದ ಪಕ್ಷಗಳಿಗೆ ಶಾಕ್ ನೀಡಲಿದೆ ಎಂದು ಹೇಳಲಾಗಿದೆ. 

ಹರ್ಯಾಣ ಮೂಲದ ಈಗ ಮಧ್ಯ ಪ್ರದೇಶದಿಂದ ಸಂಸದರಾಗಿ ಆಯ್ಕೆಯಾಗಿ ವಿದೇಶಾಂಗ ಸಚಿವೆಯಾಗಿರುವ ಸುಶ್ಮಾ ಮೋದಿ ಸಂಪುಟದಲ್ಲಿ ಟಾಪರ್ ಆಗಿದ್ದಾರೆ. ಜೊತೆಗೆ ಬಿಜೆಪಿಯಲ್ಲಿ ಅವರಿಗೆ ದೇಶಾದ್ಯಂತ ಎಲ್ಲ ನಾಯಕರ ಬೆಂಬಲ, ವಿಶ್ವಾಸ ಇದೆ. ಇನ್ನು ಉತ್ತರ ಪ್ರದೇಶದಲ್ಲಿ ಸಿಎಂ ಅಭ್ಯರ್ಥಿಯಾಗಲು ಸ್ಪರ್ಧಿಸುತ್ತಿರುವ ಸ್ಮೃತಿ ಇರಾನಿ, ವರುಣ್ ಗಾಂಧಿ, ಆದಿತ್ಯನಾಥ್  ಮತ್ತಿತರರಿಗೆ ಹೋಲಿಸಿದರೆ ಸುಶ್ಮಾ ಅವರ ವರ್ಚಸ್ಸು ಬಹುದೊಡ್ಡದು. ಅವರನ್ನು ಈ ಹುದ್ದೆಗೆ ಪಕ್ಷದಲ್ಲಿ ವಿರೋಧಿಸುವವರೂ ಕಡಿಮೆ . ಸಂಘಪರಿವಾರವೂ ಅವರಿಗೆ ಬೆಂಬಲ ನೀಡುತ್ತದೆ.  ಹಾಗಾಗಿ  ಈ ಪ್ರಯತ್ನಕ್ಕೆ ಮೋದಿ - ಶಾ ಜೋಡಿ ಕೈ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಸದ್ಯಕ್ಕೆ ಇದು ಕೇವಲ ವದಂತಿ  ಮಾತ್ರ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News